ಭಾರೀ ಮತಗಳ ಅಂತರದಲ್ಲಿ ಗೆಲುವು: ಶಿವಮೊಗ್ಗ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಎ. 27: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತವಾಗಿದ್ದು, ಭಾರೀ ಮತಗಳ ಅಂತರದಲ್ಲಿ ವಿಜಯಿಯಾಗುತ್ತೇನೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಸಚಿವರು ಎಷ್ಟೇ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರೂ, ಹಣ ಹಂಚಿದ್ದರೂ ಕ್ಷೇತ್ರದ ಮತದಾರರು ಅದಕ್ಕೆ ಬಲಿಯಾಗದೇ ಮೋದಿಗೆ ಮತ ನೀಡಿದ್ದಾರೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಯುವ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿದ್ದಾರೆ. ಹಾಗೆಯೇ ಇದೇ ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗಿದೆ. ತ್ರಿಕೋನ ಸ್ಪರ್ಧೆಯಿದ್ದಾಗಲೇ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತಗಳಿಂದ ಆಯ್ಕೆಯಾಗಿರುವಾಗ, ಈ ಬಾರಿ ನೇರ ಸ್ಪರ್ಧೆಯಿದೆ. ಈ ಕಾರಣದಿಂದ ಇನ್ನೂ ಹೆಚ್ಚಿನ ಮತಗಳಿಂದ ತಾವು ಆಯ್ಕೆಯಾಗಲಿದ್ದೇನೆ ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ತಮ್ಮ ಪರವಾಗಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಹಾಗಾಗಿ ಲೋಕಸಭೆ ಕ್ಷೇತ್ರದ ಎಂಟೂ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಅತಿ ಹೆಚ್ಚಿನ ಮತ ಬರಲಿದೆ. 2021 ಬೂತ್ ಗಳೊಂದಿಗೆ ಕನಿಷ್ಠ 1 ಲಕ್ಷ ಮತಕ್ಕಿಂತ ಕಡಿಮೆಯಿಲ್ಲದೆ ಜಯ ಸಾಧಿಸಲಿದ್ದೇನೆ ಎಂದರು.
ರಾಜ್ಯದ 28 ಲೋಕಸಭೆ ಕ್ಷೇತ್ರದ ಪೈಕಿ ಬಿಜೆಪಿ ಅತ್ಯಧಿಕ ಸ್ಥಾನಗಳಲ್ಲಿ ಜಯ ಸಾಧಿಸಲಿದೆ. ಭದ್ರಾವತಿಯಲ್ಲಿ ಹಣ ಹಂಚಿಕೆ ವಿಷಯ ಬೆಳಕಿಗೆ ಬಂದಿದ್ದು ಎಲ್ಲರಿಗೂ ಗೊತ್ತಿದೆ. ಅಲ್ಲಿನ ಮಾಜಿ ಶಾಸಕರ ಪುತ್ರನೇ ಹಣ ಹಂಚುವಾಗ ಸಿಕ್ಕಿ ಬಿದ್ದಿದ್ದಾರೆ. ಹಾಗಾಗಿ ನಾವು ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.







