ಎ.29, 30 ರಂದು ಸಿಇಟಿ ಪರೀಕ್ಷೆ
1.94 ಲಕ್ಷ ವಿದ್ಯಾರ್ಥಿಗಳು ಭಾಗಿ ಸಾಧ್ಯತೆ

ಬೆಂಗಳೂರು, ಎ.27: ರಾಜ್ಯ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯು ಎ.29 ಹಾಗೂ 30 ರಂದು ನಡೆಯಲಿದ್ದು, ಸುಮಾರು 1,94,311 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಈ ಪೈಕಿ 97,716 ಪುರುಷ ಅಭ್ಯರ್ಥಿಗಳು ಹಾಗೂ 96,585 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 84 ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 54 ನಗರಗಳಲ್ಲಿ 431 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಗಳು ನಡೆಯಲಿವೆ. 862 ವಿಶೇಷ ಜಾಗೃತ ದಳದ ಸದಸ್ಯರು, 431 ಪ್ರಶ್ನೆ ಪತ್ರಿಕೆ ಪಾಲಕರು, ಸುಮಾರು 9700 ಕೊಠಡಿ ಮೇಲ್ವಿಚಾರಕರು ಹಾಗೂ ಒಟ್ಟಾರೆ 28,245 ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ನೇಮಿಸಲಾಗಿದೆ.
ಎ.29 ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50 ರವರೆಗೆ ಗಣಿತ. ಎ.30ರಂದು ಬೆಳಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಮೇ 1ರಂದು ಬೆಳಗ್ಗೆ 11.30 ರಿಂದ 12.30ರವರೆಗೆ ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುವುದು. ಸುಮಾರು 2200 ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಸೂಚನೆಗಳು: ಪರೀಕ್ಷಾರ್ಥಿಗಳು ಕ್ಯಾಲ್ಕ್ಯುಲೇಟರ್, ಕೈಗಡಿಯಾರ, ಮೊಬೈಲ್ ಫೋನ್, ಬ್ಲೂಟೂಥ್, ಸ್ಲೈಡ್ ರೂಲ್ಸ್, ವೈಟ್ ಫ್ಯೂಯಿಡ್, ವೈರ್‌ಲೆಸ್ ಸೆಟ್ಸ್, ಪೇಪರ್ ಚೀಟಿ, ಪುಸ್ತಕಗಳು ಇತ್ಯಾದಿಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಪ್ರವೇಶ ಪತ್ರದ ಜೊತೆಯಲ್ಲಿ ಅಭ್ಯರ್ಥಿಯು ಕಡ್ಡಾಯವಾಗಿ ಮಾನ್ಯತೆ ಇರುವ ಭಾವಚಿತ್ರವುಳ್ಳ ಯಾವುದಾದರೂ ಒಂದು, ಕಾಲೇಜಿನ ಗುರುತಿನ ಚೀಟಿ, ದ್ವಿತೀಯ ಪಿಯುಸಿ, 12ನೇ ತರಗತಿಯ ಪ್ರವೇಶ ಪತ್ರ, ಬಸ್‌ಪಾಸ್, ಚಾಲನ ಪರವಾನಗಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಬೇಕು.
ನಿಗದಿಪಡಿಸಿರುವ ಪರೀಕ್ಷಾ ಕೇಂದ್ರವನ್ನು ಹೊರತುಪಡಿಸಿ ಬೇರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯಲು ಅಭ್ಯರ್ಥಿಗಳಿಗೆ ಅನುವು ಮಾಡಿಕೊಡುವುದಿಲ್ಲ. ವಿದ್ಯಾರ್ಥಿಯು ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ ಅನ್ನು ಮಾತ್ರ ಉಪಯೋಗಿಸಬೇಕು. ಪರೀಕ್ಷಾ ಕೊಠಡಿಯ ಒಳಗಡೆ ಪೆನ್ಸಿಲ್ ಅನ್ನು ತೆಗೆದುಕೊಂಡು ಹೋಗಬಾರದು.
ಕೊಠಡಿ ಮೇಲ್ವಿಚಾರಕರು ತಮಗೆ ನೀಡುವ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಸಿಇಟಿ ಸಂಖ್ಯೆ, ಹೆಸರು ಹಾಗೂ ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಸಿಇಟಿ ಸಂಖ್ಯೆ, ಹೆಸರು ಒಂದೇ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅದೇ ರೀತಿ ಪ್ರಶ್ನೆಪತ್ರಿಕೆಯ ಮತ್ತು ಓಎಂಆರ್ ಉತ್ತರ ಪತ್ರಿಕೆಯ ವರ್ಷನ್ ಕೋಡ್ ಒಂದೇ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ನಿಷೇಧಾಜ್ಞೆ: ಬೆಂಗಳೂರು ನಗರದಲ್ಲಿನ 84 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಎ.29 ಹಾಗೂ 30ರಂದು ಬೆಳಗ್ಗೆ 10 ಗಂಟೆಗೆಯಿಂದ ಸಂಜೆ 4.30ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.







