ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ: ವಿದ್ಯಾರ್ಥಿನಿ ಸಾವು

ದಾವಣಗೆರೆ,ಎ.27: ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವಿದ್ಯಾರ್ಥಿನಿಗೆ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿಶ್ವ ವಿದ್ಯಾನಿಲಯದ ಮುಖ್ಯ ಗೇಟ್ ಎದುರು ಶನಿವಾರ ಸಂಭವಿಸಿದೆ.
ದಾವಿವಿ ಗಣಿತ ವಿಭಾಗದ ವಿದ್ಯಾರ್ಥಿನಿ ಶೈಲಜಾ(23) ಮೃತಪಟ್ಟವರು. ವಿದ್ಯಾರ್ಥಿನಿ ಶೈಲಜಾ ತರಗತಿ ಮುಗಿಸಿಕೊಂಡು ಮನೆಗೆ ಹೋಗಲೆಂದು ತಮ್ಮ ದ್ವಿಚಕ್ರ ವಾಹನದಲ್ಲಿ ವಿವಿಯಿಂದ ಹೊರಗೆ ಬರುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದೆ. ಕಾರು ಢಿಕ್ಕಿ ಹೊಡೆದ ರಭಸಕ್ಕೆ ಶೈಲಜಾ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿದೆ. ತಕ್ಷಣವೇ ಗಾಯಾಳು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ.
ದಾವಣಗೆರೆ ತಾ. ಗುಮ್ಮನೂರು ಗ್ರಾಮದ ಶೈಲಜಾರನ್ನು ಕುರ್ಕಿ ಗ್ರಾಮದ ಯುವರಾಜ ಎಂಬುವರಿಗೆ ಮದುವೆ ಮಾಡಲಾಗಿತ್ತು. ಮದುವೆಯ ನಂತರವೂ ಶೈಲಜಾಳನ್ನು ಗಂಡನ ಮನೆಯವರು ಓದಿಸುತ್ತಿದ್ದರು. ಕಾಲೇಜು ಮುಗಿಸಿಕೊಂಡು ಮನೆಗೆ ವಾಪಾಸ್ಸಾಗಲೆಂದು ವಿವಿಯಿಂದ ಬರುತ್ತಿದ್ದಾಗ ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಅತೀ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಆಕೆ ಸಾವನ್ನಪ್ಪಿದ್ದು, ಈ ಸಾವಿಗೆ ರಾಜ್ಯ ಹೆದ್ದಾರಿ ಪ್ರಾಧಿಕಾರವೇ ಕಾರಣವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.







