ಪುರುಷರ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಪ್ರಪ್ರಥಮ ಮಹಿಳಾ ಅಂಪೈರ್!

ಮುಂಬೈ, ಎ.27: ಆಸ್ಟ್ರೇಲಿಯದ ಕ್ಲೇರ್ ಪೊಲೊಸಾಕ್ ಶನಿವಾರ ನಡೆದ ಪುರುಷರ ಅಂತರ್‌ರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅಂಪೈರಿಂಗ್ ಮಾಡುವ ಮೂಲಕ ಅಂಪೈರ್ ಸ್ಥಾನ ನಿರ್ವಹಿಸಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ವಿಂಡೋಕ್‌ನಲ್ಲಿ ನಡೆದ ವಿಶ್ವ ಕ್ರಿಕೆಟ್ ಲೀಗ್ ನ 2ನೇ ಡಿವಿಜನ್ ನ ನಮೀಬಿಯಾ ಹಾಗೂ ಒಮಾನ್ ಮಧ್ಯೆ ನಡೆದ ಪಂದ್ಯದಲ್ಲಿ ಅಂಪೈರ್ ಆಗಿ ಕ್ಲೇರ್ ಕಾರ್ಯ ನಿರ್ವಹಿಸಿದರು.
31 ವರ್ಷದ ಕ್ಲೇರ್ ಎಂದೂ ಕ್ರಿಕೆಟ್ ಆಡಿಲ್ಲವಾದರೂ 2017ರಲ್ಲಿ ಸಿಡ್ನಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ಹಾಗೂ ನ್ಯೂ ಸೌಥ್‌ವೇಲ್ಸ್ ಮಧ್ಯೆ ನಡೆದ ಪುರುಷರ ಉನ್ನತ ಮಟ್ಟದ ಪಂದ್ಯದಲ್ಲಿ ಅಂಪೈರಿಂಗ್ ಮಾಡಿದ್ದ ಮೊದಲ ಮಹಿಳೆ ಎನಿಸಿಕೊಂಡಿದ್ದರು.
ಪೊಲೊಸಾಕ್ ಈವರೆಗೆ 15 ಮಹಿಳಾ ಏಕದಿನ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದು, ನವೆಂಬರ್ 2016ರಲ್ಲಿ ಆಸ್ಟ್ರೇಲಿಯ ಹಾಗೂ ದ.ಆಫ್ರಿಕ ಮಧ್ಯೆ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಅಂಪೈರ್ ಆಗಿದ್ದರು. 2018ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಅಂಗಣದಲ್ಲಿದ್ದ ಕ್ಲೇರ್, 2017ರ ಐಸಿಸಿ ಮಹಿಳಾ ವಿಶ್ವಕಪ್‌ನ ನಾಲ್ಕು ಪಂದ್ಯಗಳಲ್ಲಿ ಅಂಪೈರ್ ಆಗಿದ್ದರು.
ತಮ್ಮ ಆಯ್ಕೆ ಕುರಿತು ಮಾತನಾಡಿರುವ ಕ್ಲೇರ್ ‘‘ಪುರುಷರ ಏಕದಿನ ಪಂದ್ಯದಲ್ಲಿ ಮೊದಲ ಮಹಿಳಾ ಅಂಪೈರ್ ಆಗಿ ಆಯ್ಕೆಯಾಗಿದ್ದಕ್ಕೆ ಹಾಗೂ ಇಲ್ಲಿಯವರೆಗೆ ಬೆಳೆದು ಬಂದ ಬಗೆ ರೋಮಾಂಚನ ತರಿಸಿದೆ. ಮಹಿಳಾ ಅಂಪೈರ್‌ಗಳನ್ನು ಉತ್ತೇಜಿಸುವುದು ಮುಖ್ಯವಾಗಿದೆ. ಕ್ರಿಕೆಟ್‌ನಲ್ಲಿ ಮಹಿಳೆಯರು ಯಾಕೆ ಅಂಪೈರಿಂಗ್ ಮಾಡಬಾರದು ಎಂಬುದಕ್ಕೆ ಕಾರಣಗಳೇ ಇಲ್ಲ. ಮಹಿಳೆಯರಲ್ಲಿ ಜಾಗೃತಿ ಮೂಡಿಸಿ, ತಡೆಗಳನ್ನು ದಾಟುವ ಕಾಲವಿದು’’ ಎಂದು ಹೇಳಿದ್ದಾರೆ.
ನಮೀಬಿಯಾ ಹಾಗೂ ಒಮಾನ್ ಎರಡೂ ತಂಡಗಳು ಐಸಿಸಿ ವಿಶ್ವ ಕ್ರಿಕೆಟ್ ಲೀಗ್‌ನ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ಮೂಲಕ ಏಕದಿನ ತಂಡದ ಸ್ಥಾನಮಾನ ಪಡೆದಿವೆ.







