ಪಾಕಿಸ್ತಾನದ ಮೇಲೆ ಅಮೆರಿಕ ದಿಗ್ಬಂಧನ: ವೀಸಾ ತಡೆಹಿಡಿಯುವ ಎಚ್ಚರಿಕೆ

ವಾಶಿಂಗ್ಟನ್, ಎ. 27: ಅಮೆರಿಕದಿಂದ ಗಡಿಪಾರಾಗಿರುವ ಹಾಗೂ ವೀಸಾ ಅವಧಿ ಮೀರಿ ನೆಲೆಸಿರುವ ತನ್ನ ನಾಗರಿಕರನ್ನು ಸ್ವೀಕರಿಸಲು ಪಾಕಿಸ್ತಾನ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಆ ದೇಶದ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿದೆ. ಅದೇ ವೇಳೆ, ಪಾಕಿಸ್ತಾನಿಯರ ವೀಸಾಗಳನ್ನು ತಾನು ತಡೆಹಿಡಿಯಬಹುದು ಹಾಗೂ ಈ ಪ್ರಕ್ರಿಯೆಯನ್ನು ಹಿರಿಯ ಅಧಿಕಾರಿಗಳಿಂದಲೇ ಆರಂಭಿಸಬಹುದು ಎಂದು ಅಮೆರಿಕ ಎಚ್ಚರಿಸಿದೆ.
ಪಾಕಿಸ್ತಾನದಲ್ಲಿನ ಅಮೆರಿಕದ ಕೌನ್ಸುಲರ್ ಚಟುವಟಿಕೆಗಳಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಗಳಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದೆ. ಆದರೆ, ಎಪ್ರಿಲ್ 22ರ ಫೆಡರಲ್ ರಿಜಿಸ್ಟರ್ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಇಂಥ ದಿಗ್ಬಂಧನದ ಪರಿಣಾಮವಾಗಿ, ಅಮೆರಿಕವು ಹಿರಿಯ ಪಾಕಿಸ್ತಾನಿ ಅಧಿಕಾರಿಗಳಿಂದ ಆರಂಭವಾಗಿ ಪಾಕಿಸ್ತಾನಿಯರ ವೀಸಾಗಳನ್ನು ತಡೆಹಿಡಿಯಬಹುದಾಗಿದೆ ಎಂದು ಅದು ಹೇಳಿದೆ.
ಪಾಕಿಸ್ತಾನ ಅಮೆರಿಕದ ಈ ಕಾನೂನಿನನ್ವಯ ದಿಗ್ಬಂಧನಗಳಿಗೆ ಒಳಗಾಗಿರುವ 10ನೇ ದೇಶವಾಗಿದೆ. ಈ ಪೈಕಿ 8 ದೇಶಗಳ ಮೇಲೆ ಟ್ರಂಪ್ ಆಡಳಿತದ ಅವಧಿಯಲ್ಲಿ ವೀಸಾ ದಿಗ್ಬಂಧನಗಳನ್ನು ಹೇರಲಾಗಿದೆ. ಈ ಪಟ್ಟಿಗೆ ಘಾನಾ ಮತ್ತು ಪಾಕಿಸ್ತಾನಗಳನ್ನು ಈ ವರ್ಷ ಸೇರಿಸಲಾಗಿದೆ. ಪಟ್ಟಿಯಲ್ಲಿರುವ ಇತರ ದೇಶಗಳೆಂದರೆ ಗಯಾನ, ಗಾಂಬಿಯ, ಕಾಂಬೋಡಿಯ, ಎರಿಟ್ರಿಯ, ಗಿನಿ, ಸಿಯಾರ ಲಿಯೋನ್, ಬರ್ಮ ಮತ್ತು ಲಾವೋಸ್.





