ಕುಂದಗೋಳ ಉಪ ಚುನಾವಣೆ: ಚಿಕ್ಕನಗೌಡರ್‌ಗೆ ಟಿಕೆಟ್- ಬಿಜೆಪಿಯಲ್ಲಿ ಬಂಡಾಯ ಸ್ಫೋಟ

ಬೆಂಗಳೂರು, ಎ. 27: ಕುಂದಗೋಳ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಚಿಕ್ಕನಗೌಡರ್‌ಗೆ ಟಿಕೆಟ್ ಅಂತಿಮಗೊಳಿಸುತ್ತಿದ್ದಂತೆ ಪಕ್ಷದಲ್ಲಿ ಬಂಡಾಯದ ಬೇಗುದಿ ಭುಗಿಲೆದ್ದಿದ್ದು, ‘ಚಿಕ್ಕನಗೌಡರ್‌ಗೆ ಟಿಕೆಟ್ ನೀಡಿದರೆ ಅವರನ್ನು ನಾವೇ ಸೋಲಿಸುತ್ತೇವೆ’ ಎಂಬ ಎಚ್ಚರಿಕೆ ಸಂದೇಶ ನೀಡಲಾಗಿದೆ.
ಚಿಕ್ಕನಗೌಡರ್ ಅವರಿಗೆ ಬಿಜೆಪಿ ಬಹುತೇಕ ಖಚಿತವಾಗಿದ್ದು, ಆಕಾಂಕ್ಷಿಯಾಗಿದ್ದ ಎಂ.ಆರ್.ಪಾಟೀಲ್ ಅಸಮಾಧಾನಗೊಂಡು ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಯಾರೊಬ್ಬರ ಕೈಗೆ ಸಿಗದೆ ರಹಸ್ಯ ಸ್ಥಳಕ್ಕೆ ತೆರಳುವ ಮೂಲಕ ಬಂಡಾಯದ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಕುಂದಗೋಳ ಕ್ಷೇತ್ರದ ಪಕ್ಷದ ಮತ್ತೊರ್ವ ಮುಖಂಡ ಪ್ರಕಾಶ್ ಗೌಡ ಪಾಟೀಲ್, ‘ಕುಂದಗೋಳ ಕ್ಷೇತ್ರದ ಸ್ಥಳೀಯ ವರದಿಯನ್ನು ಪಡೆಯದೆ ಚಿಕ್ಕನಗೌಡರ್ ಅವರಿಗೆ ಟಿಕೆಟ್ ಅಂತಿಮಗೊಳಿಸಲಾಗಿದೆ. ಆದರೆ, ಸ್ಥಳೀಯರಲ್ಲಿ ಎಸ್.ಆರ್.ಪಾಟೀಲ್ ಪರ ಕ್ಷೇತ್ರದಲ್ಲಿ ಒಲವಿದೆ. ಅವರ ಬದಲಿಗೆ ಚಿಕ್ಕನಗೌಡರಿಗೆ ಬಿಜೆಪಿ ಟಿಕೆಟ್ ನೀಡಿದರೆ ನಾವೇ ಅವರನ್ನು ಮತ್ತೊಮ್ಮೆ ಸೋಲಿಸುತ್ತೇವೆ’ ಎಂದು ಟ್ವಿಟ್ಟರ್ ಮೂಲಕ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಮುಖಂಡರು ಸ್ಥಳೀಯರ ವರದಿಯನ್ನು ಪಡೆದಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ. 2013ರಲ್ಲಿ ಚಿಕ್ಕನಗೌಡರ್ ಕೆಜೆಪಿ ಸೇರಿದ್ದಾಗ ಬಿಜೆಪಿಯಿಂದ ಎಂ.ಆರ್. ಪಾಟೀಲ್ ಸ್ಪರ್ಧೆ ಮಾಡಿದ್ದರು. ಆದರೆ, 2018ರ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಎಂ.ಆರ್.ಪಾಟೀಲ್ ಬೇಸರಗೊಂಡಿದ್ದರು. ಈ ಬಾರಿಯೂ ಟಿಕೆಟ್ ಸಿಗದಿದ್ದರೆ ಪಾಟೀಲ್ ಪಕ್ಷದ ವಿರುದ್ಧ ಬಂಡಾಯ ನಿಶ್ಚಿತ ಎಂದು ಹೇಳಲಾಗುತ್ತಿದೆ.
ವಿಪಕ್ಷ ಬಿಜೆಪಿ ವಿಧಾನಸಭೆಯಲ್ಲಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವ ಬೆನ್ನಲ್ಲೆ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಬಂಡಾಯ ಪಕ್ಷದ ರಾಜ್ಯ ಮುಖಂಡರಿಗೆ ತೀವ್ರ ತಲೆನೋವಾಗಿದ್ದು, ಬಿಜೆಪಿ ಹೈಕಮಾಂಡ್ ಟಿಕೆಟ್ ಅಧಿಕೃತ ಘೋಷಣೆಗೆ ಮೀನಾಮೇಷ ಎಣಿಸುವಂತಾಗಿದೆ.
ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದೆ. ನನಗೆ ಪಕ್ಷ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕ್ಷೇತ್ರದ ಮುಖಂಡರು-ಕಾರ್ಯಕರ್ತರೊಂದಿಗೆ ಚರ್ಚಿಸಿದ್ದೇನೆ. ಭವಿಷ್ಯದ ದೃಷ್ಟಿಯಿಂದ ನಾನು ಬಿಜೆಪಿಯಲ್ಲೇ ಮುಂದುವರಿಯಲಿದ್ದು, ಪಕ್ಷದ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಪರ ಕೆಲಸ ಮಾಡಲಿದ್ದೇನೆ’
-ಸುನೀಲ್ ವಲ್ಯಾಪುರೆ, ಮಾಜಿ ಸಚಿವ, ಬಿಜೆಪಿ ಟಿಕೆಟ್ ಆಕಾಂಕ್ಷಿ







