ಅಪಾಯದ ಸ್ಥಿತಿಯ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಸದಸ್ಯರ ಒತ್ತಾಯ
ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಒಕ್ಕೊರಲಿನ ನಿರ್ಣಯ

ಬೆಂಗಳೂರು, ಎ.27: ಮಳೆಗಾಲ ಸಮೀಪಿಸುತ್ತಿರುವುದರಿಂದ ನಗರದಾದ್ಯಂತ ಹಳೆಯದಾದ, ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕೆಂದು ಪಕ್ಷಾತೀತವಾಗಿ ಪಾಲಿಕೆ ಸದಸ್ಯರು ಒತ್ತಾಯಿಸಿದರು.
ಶನಿವಾರ ನಡೆದ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪಾಲಿಕೆಯ ಸದಸ್ಯರು ಒಕ್ಕೊರಲಿನ ಧ್ವನಿಗೂಡಿಸಿ, ಜೂನ್ ತಿಂಗಳ ಆರಂಭದಲ್ಲಿ ನಗರಕ್ಕೆ ಮುಂಗಾರು ಮಳೆಯ ಆಗಮನ ಆಗುವುದರಿಂದ ಮಳೆಯ ಆರ್ಭಟಕ್ಕೆ ಹಳೆಯದಾದ ಮರಗಳು ಉರುಳಿ ಅವಘಢ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ, ನಗರದಾದ್ಯಂತ ಇರುವ ಹಳೆಯದಾದ ಮರಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಕೂಡಲೇ ತೆರವುಗೊಳಿಸಬೇಕಿದೆ. ಮರಗಳನ್ನು ತೆರವುಗೊಳಿಸಲು ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಕೂಡಲೇ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜನ್ ಉತ್ತರಿಸಿ ಇದುವರೆಗೆ ಹಳೆಯದಾದ 616 ಮರಗಳನ್ನು ತೆರವುಗೊಳಿಸಲಾಗಿದೆ. 3,600 ರೆಂಬೆ- ಕೊಂಬೆಗಳನ್ನು ಕತ್ತರಿಸಲಾಗಿದೆ. ತೆರವು ಮಾಡಿರುವ ಮರಳಿಂದ 10 ಲಕ್ಷ ರೂ. ಆದಾಯ ಬಂದಿದೆ. ಪಾಲಿಕೆಯಲ್ಲಿ ಸದ್ಯ 21 ಟೀಂಗಳಿವೆ, ಪ್ರತಿ ಕ್ಷೇತ್ರಕ್ಕೆ ಒಂದರಂತೆ ಒಂದು ಟೀಂ ಅಗತ್ಯವಿದೆ. ಕೂಡಲೇ ಟೆಂಡರ್ ಕರೆದು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಯನಗರದಲ್ಲಿ ನಮ್ಮ ಮೆಟ್ರೊದಿಂದ ಅನಧಿಕೃತವಾಗಿ ಮರಗಳನ್ನು ಕಡಿಯಲಾಗಿದೆ. ಅದು ಚೆನ್ನಾಗಿರುವ ಮರವನ್ನೇ, ಅಡ್ಡಿಯಾಗುತ್ತಿರುವ ನೆಪದಲ್ಲಿ ಕತ್ತರಿಸಿದ್ದಾರೆ. ಬಿಎಂಆರ್‌ಸಿಎಲ್‌ನ ಚಂದ್ರಕಾಂತ್ ಎಂಬುವರ ಮೇಲೆ ಕೇಸು ದಾಖಲು ಮಾಡಲಾಗಿದೆ. ಇನ್ನು ಮುಂದೆ ಚೆನ್ನಾಗಿರುವ ಮರಗಳನ್ನು ಕಡಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎನ್‌ಜಿಒಗಳ ಅಡ್ಡಿ: ನಗರದಲ್ಲಿ ಮರ ಕಡಿಯಲು ಸಾಕಷ್ಟು ಅಡ್ಡಿಯಾಗುತ್ತಿದೆ. ಕೆಲವು ಎನ್‌ಜಿಒಗಳು ಮರ ಕಡಿಯದಂತೆ ಅಡ್ಡಿಪಡಿಸುತ್ತಿದ್ದಾರೆ. ದಿನಕ್ಕೆ 20-30 ಎನ್‌ಜಿಒಗಳು ನಮ್ಮ ಕಚೇರಿಗೆ ಬಂದು ನಗರದಲ್ಲಿ ಮರ ಕಡಿಯದಂತೆ ಮನವಿ ಮಾಡುತ್ತಿವೆ. ಆದರೂ ತಕ್ಷಣ ಅಪಾಯದ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.
ಕೆಆರ್‌ಐಡಿಎಲ್ ಕಾಮಗಾರಿ: ವಿಪಕ್ಷ ಮತ್ತು ವಿಶೇಷ ಆಯುಕ್ತರ ವಿರೋಧದ ನಡುವೆಯೂ ಮೈತ್ರಿ ಆಡಳಿತ ನವ ಬೆಂಗಳೂರು ಯೋಜನೆ ಅನುದಾನದಲ್ಲಿ ವಾರ್ಡ್ ಮಟ್ಟದ ಅಭಿವೃದ್ಧಿ ಕಾಮಗಾರಿಗಳನ್ನು ಕೆಆರ್‌ಐಡಿಎಲ್ ಮೂಲಕ ನಡೆಸಲು ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿದೆ.
ನಗರೋತ್ಥಾನ ಯೋಜನೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿವೇಚನೆಗೆ ಒಳಪಟ್ಟು ಕಾಯ್ದಿರಿಸಿದ ಅನುದಾನದಲ್ಲಿ ಕುಡಿಯುವ ನೀರು, ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರತಿ ವಾರ್ಡ್‌ಗೆ 4 ಕೋಟಿ ರೂ. ಸೇರಿ ವಿವಿಧ ಕಾಮಗಾರಿಗಾಗಿ ಒಟ್ಟು 1,300 ಕೋಟಿ ರೂ. ಬಳಕೆ ಮಾಡಿಕೊಳ್ಳಲು ಸರಕಾರಕ್ಕೆ ಅವಕಾಶ ನೀಡುವಂತೆ ಕೌನ್ಸಿಲ್ ಸಭೆಗೆ ಪ್ರಸ್ತಾವನೆಯನ್ನು ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಸಲ್ಲಿಸಿದರು.
ತುರ್ತು ಉಲ್ಲೇಖವಿಲ್ಲ: ನವ ಬೆಂಗಳೂರು ಯೋಜನೆಯಡಿ ತುರ್ತು ಕಾಮಗಾರಿಗೆ ಅನುದಾನ ಬಳಕೆ ಮಾಡಿಕೊಳ್ಳಲಾಗುವುದೆಂದು ತಿಳಿಸಿದ ಮೈತ್ರಿಕೂಟ, ನಿರ್ಣಯ ಪತ್ರದಲ್ಲಿ ಮಾತ್ರ ತುರ್ತು ಕಾಮಗಾರಿಗಾಗಿ ಅನುದಾನ ಬಳಕೆ ಎಂದು ಉಲ್ಲೇಖಿಸಿಲ್ಲ. ಈ ಬಗ್ಗೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಆಡಳಿತ ಪಕ್ಷದ ನಾಯಕ ವಾಜಿದ್ ಅವರನ್ನು ಕೇಳಿದರೆ, ವಾರ್ಡ್ ಮಟ್ಟದ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ತುರ್ತು ಕಾಮಗಾರಿಗಳೂ ಬರುತ್ತದೆ ಎಂದು ಸಮರ್ಥಿಸಿಕೊಂಡರು.
ಅಧಿಕಾರಿಗಳ ನಿರ್ಲಕ್ಷ್ಯ: ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು, ಟೆಂಡರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ವತಃ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಒಪ್ಪಿಕೊಂಡಿದ್ದಾರೆ. ಹಾಗೇ ವಿಜಯನಗರ, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿನ ಕಾಮಗಾರಿಗಳು ಅರ್ಧಕ್ಕೆ ನಿಲ್ಲಲೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಸಮಾಧಾನ ಹೊರ ಹಾಕಿದರು.
ಚುನಾವಣಾ ಆಯೋಗ ತುರ್ತು ಪರಿಸ್ಥಿತಿಗಳಲ್ಲಿ ಟೆಂಡರ್ ಕರೆಯಲು ಅನುಮತಿ ನೀಡಿದೆ. ಆದರೆ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ. ನೀತಿ ಸಂಹಿತೆ ಇನ್ನು 23 ದಿನ ಬಾಕಿ ಇರುವುದರಿಂದ ನವ ಬೆಂಗಳೂರು ಯೋಜನೆಯನ್ನು ಕೆಆರ್‌ಐಡಿಎಲ್ ಮೂಲಕ ನಡೆಸುವಂತಹ ಯಾವುದೇ ಪ್ರಸ್ತಾಪವನ್ನು ಸಲ್ಲಿಸುವುದು ಬೇಡ.
-ಮನೋಜ್ ಕುಮಾರ್ ಮೀನಾ, ಬಿಬಿಎಂಪಿ ವಿಶೇಷ ಆಯುಕ್ತ







