ಹೆಚ್ಚು ನೀರು ಕುಡಿಯುವುದರಿಂದ ಏನು ಲಾಭ?: ಇಲ್ಲಿದೆ ಮಾಹಿತಿ
ನೀವು ದಿನವಿಡೀ ವಿವಿಧ ಪಾನೀಯಗಳನ್ನು ಸೇವಿಸುತ್ತೀರಿ. ಸೋಡಾದಿಂದ ಹಿಡಿದು ಕಾಫಿವರೆಗೆ ಲೆಕ್ಕ ಹಾಕಿದರೆ ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಆದರೆ ಈ ಪಾನೀಯಗಳಲ್ಲಿ ಯಾವುದು ಆರೋಗ್ಯಕರ,ಯಾವುದು ಅಲ್ಲ ಎನ್ನುವುದು ನಿಮಗೆ ಗೊತ್ತಿದೆಯೇ? ನೀರು ನೀವು ಯಾವಾಗಲೂ ಸೇವಿಸಬಹುದಾದ ಅತ್ಯುತ್ತಮ ಪಾನೀಯವಾಗಿದೆ. ದಿನವಿಡೀ ವಿವಿಧ ಪಾನೀಯಗಳ ಬದಲಾಗಿ ನೀರನ್ನೇ ಸೇವಿಸುತ್ತಿದ್ದರೆ ಅದು ಅಚ್ಚರಿದಾಯಕ ಫಲಿತಾಂಶಗಳನ್ನು ನೀಡುತ್ತದೆ. ಹೆಚ್ಚು ನೀರು ಕುಡಿದಷ್ಟೂ ಹೆಚ್ಚು ಆರೋಗ್ಯಲಾಭಗಳು ದೊರೆಯುತ್ತವೆ. ಆದರೆ ಹೆಚ್ಚಿನವರು ಸಾಕಷ್ಟು ನೀರು ಕುಡಿಯುವುದನ್ನು ಮರೆಯುತ್ತಾರೆ. ಅಂತಹವರು ಈ ಕೊರತೆಯನ್ನು ನೀಗಿಸಲು ಈ ಸರಳ ಉಪಾಯವನ್ನು ಅನುಸರಿಸಬಹುದು. ಇತರ ಯಾವುದೇ ಪಾನೀಯದ ಬದಲು ನೀರನ್ನೇ ಸೇವಿಸಿದರಾಯಿತು. ಇದರ ಅದ್ಭುತ ಆರೋಗ್ಯಲಾಭಗಳು ಇಲ್ಲಿವೆ.....
►ತ್ವರಿತ ತೂಕ ಇಳಿಕೆ
ಇತರ ಪಾನೀಯಗಳ ಬದಲು ನೀರನ್ನೇ ಸೇವಿಸುತ್ತಿರುವುದು ಶರೀರದ ತೂಕವನ್ನು ಇಳಿಸಿಕೊಳ್ಳಲು ಅತ್ಯುತ್ತಮ ಮತ್ತು ಸುಲಭ ಉಪಾಯವಾಗಿದೆ. ನೀವು ಹೆಚ್ಚು ನೀರು ಕುಡಿದಾಗ ತ್ವರಿತವಾಗಿ ಶರೀರದ ತೂಕವು ಕಡಿಮೆಯಾಗುತ್ತದೆ. ಒಂಭತ್ತು ದಿನಗಳ ಕಾಲ ನೀವು ಇತರ ಯಾವುದೇ ಪಾನೀಯವನ್ನು ಸೇವಿಸದೆ ನೀರನ್ನೇ ಅವಲಂಬಿಸಿದ್ದರೆ ಪ್ರತಿ ದಿನ ಎಂಟು ಕಿ.ಮೀ.ಜಾಗಿಂಗ್ ಮಾಡಿದಾಗ ಕಳೆದುಕೊಳ್ಳುವಷ್ಟೇ ಕ್ಯಾಲರಿಗಳನ್ನು ಕಳೆದುಕೊಳ್ಳುತ್ತೀರಿ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.
►ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ
ಇತರ ಪಾನೀಯಗಳ ಬದಲು ನೀರನ್ನೇ ಸೇವಿಸುವುದು ಶರೀರದಲ್ಲಿ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ದಿನವಿಡೀ ನೀರನ್ನು ಸೇವಿಸುತ್ತಿದ್ದರೆ ಶರೀರದಲ್ಲಿ ಶಕ್ತಿ ತುಂಬಿರುತ್ತದೆ. ಇದರಿಂದ ದೈನಂದಿನ ಕೆಲಸಗಳನ್ನು ಮಾಡುವ ಕ್ಷಮತೆಯೂ ಹೆಚ್ಚುತ್ತದೆ.
►ಮಿದುಳಿನ ಕಾರ್ಯ ನಿರ್ವಹಣೆ ಉತ್ತಮಗೊಳ್ಳುತ್ತದೆ
ಮಾನವನ ಮಿದುಳಿನ ಶೇ.75ರಿಂದ ಶೇ.85ರಷ್ಟು ಭಾಗ ನೀರಿನಿಂದ ಮಾಡಲ್ಪಟ್ಟಿರುತ್ತದೆ. ಹೆಚ್ಚು ನೀರಿನ ಸೇವನೆಯು ಮನಸ್ಸಿನ ಏಕಾಗ್ರತೆಗೆ ನೆರವಾಗುತ್ತದೆ. ಇದರಿಂದ ನಿಮ್ಮ ಎಲ್ಲ ದೈನಂದಿನ ಕೆಲಸಗಳನ್ನು ಚುರುಕಾಗಿ ಮತ್ತು ದಕ್ಷತೆಯಿಂದ ಮಾಡಲು ಸಾಧ್ಯವಾಗುತ್ತದೆ.
►ಹಸಿವನ್ನು ಕ್ಷೀಣಿಸುತ್ತದೆ
ನೀವು ಹೆಚ್ಚು ನೀರನ್ನು ಸೇವಿಸಿದಾಗ ಕಡಿಮೆ ಆಹಾರವನ್ನು ಸೇವಿಸುತ್ತೀರಿ. ಹೆಚ್ಚಿನ ಕ್ಯಾಲರಿಗಳಿರುವ ಏನಾದರೂ ತಿನಿಸನ್ನು ಸೇವಿಸಬೇಕೆಂಬ ತುಡಿತವುಂಟಾದಾಗ ಒಂದು ಗ್ಲಾಸ್ ನೀರನ್ನು ಕುಡಿದರೆ ಅಂತಹ ತುಡಿತ ಮಾಯವಾಗುತ್ತದೆ. ಹೆಚ್ಚು ನೀರಿನ ಸೇವನೆ ನಿಮ್ಮ ತೂಕವನ್ನು ನಿಯಂತ್ರಿಸಲು ನೆರವಾಗುತ್ತದೆ ಮತ್ತು ನಿಮ್ಮನ್ನು ಆರೋಗ್ಯವಂತರನ್ನಾಗಿರಿಸುತ್ತದೆ. ನಿಮ್ಮಾಂದಿಗೆ ಸದಾ ನೀರನ್ನು ಇಟ್ಟುಕೊಂಡಿರಿ ಮತ್ತು ಅನಗತ್ಯ ಕ್ಯಾಲರಿಗಳಿಗೆ ಗುಡ್ ಬೈ ಹೇಳಿ.
►ವಿಷವಸ್ತುಗಳನ್ನು ತ್ವರಿತವಾಗಿ ಹೊರಗೆ ಹಾಕುತ್ತದೆ
ಹೆಚ್ಚು ನೀರು ಸೇವಿಸುವುದರಿಂದ ಶರೀರದಲ್ಲಿಯ ವಿಷವಸ್ತುಗಳು ಬೇಗನೇ ಹೊರಹಾಕಲ್ಪಡುತ್ತವೆ. ಇದು ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ವಯಸ್ಸಾಗುವುದನ್ನು ತಡೆಯುತ್ತದೆ.
►ಕಾಯಿಲೆಗಳನ್ನು ತಡೆಯುತ್ತದೆ
ಯಥೇಚ್ಛ ನೀರನ್ನು ಕುಡಿಯುವುದರಿಂದ ಹಲವಾರು ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ ಹಾಗೂ ಅಧಿಕ ರಕ್ತದೊತ್ತಡ,ಹೃದಯನಾಳೀಯ ರೋಗಗಳು,ಮೂತ್ರಕೋಶದ ತೊಂದರೆ ಮತ್ತು ಅಜೀರ್ಣದಂತಹ ಹಲವಾರು ಗಂಭೀರ ಅನಾರೋಗ್ಯಗಳುಂಟಾಗುವುದನ್ನು ನಿವಾರಿಸುತ್ತದೆ. ಹೀಗಾಗಿ ಹೆಚ್ಚೆಚ್ಚು ನೀರನ್ನು ಸೇವಿಸುವ ಮೂಲಕ ವೈದ್ಯರ ಭೇಟಿಯನ್ನು ಕಡಿಮೆ ಮಾಡಿ.