ಮೈಸೂರು ಮನಪಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿಲ್ಲ: ಮೇಯರ್ ಪುಷ್ಪಲತಾ ಜಗನ್ನಾಥ್

ಮೈಸೂರು,ಎ.27: ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿಲ್ಲ. ನೀರಿನ ಸಮಸ್ಯೆ ಎದುರಾದರೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಪಾಲಿಕೆ ಸಿದ್ಧ ಎಂದು ಮೈಸೂರು ಮಹಾನಗರಪಾಲಿಕೆಯ ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಶನಿವಾರ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ನೀರು ಪೂರೈಕೆಗೆ ಹೆಚ್ಚುವರಿ 5 ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಮೈಸೂರು ನಗರದ ನೀರಿನ ಬವಣೆ ನೀಗಿಸಲು 25 ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. 14 ನೇ ಹಣಕಾಸಿನ ಅನುದಾನದಲ್ಲಿ ಕುಡಿಯುವ ನೀರಿಗೆ ಹಣ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ. ಬೋರ್ ವೆಲ್ ಸ್ಥಿತಿ ಪರಿಶೀಲನೆ ಮಾಡಿ, ಕುಡಿಯುವ ನೀರು ಸಮರ್ಪಕವಾಗಿ ಪೂರೈಸುತ್ತೇವೆ ಎಂದರು. ಹಿನಕಲ್, ಚಾಮುಂಡಿ ಬೆಟ್ಟ ದಲ್ಲಿ ನೀರಿನ ಸಮಸ್ಯೆ ಇದೆ. ಅಗತ್ಯ ಬಿದ್ದರೆ ಪಾಲಿಕೆ ವತಿಯಿಂದ ನೀರು ಪೂರೈಕೆ ಮಾಡುತ್ತೇವೆ ಎಂದರು.
ನಾವು ಪಾಲಿಕೆ ವತಿಯಿಂದ ಒಣಗಿದ ಮರಗಳನ್ನು ತೆರವು ಮಾಡಲು ಸಿದ್ಧವಿದ್ದೇವೆ. ಆದರೆ ಒಣ ಮರ ಕಡಿಯಲು ಹೋದರೆ, ಪರಿಸರ ವಾದಿಗಳು ವಿರೋಧ ವ್ಯಕ್ತಪಡಿಸುತ್ತಾರೆ. ಪರಿಸರವಾದಿಗಳ ಸಮನ್ವಯ ಮಾಡಿಕೊಂಡು ಒಣಗಿದ ಮರ ತೆರವು ಮಾಡುತ್ತೇವೆ ಎಂದರು.
ಮರ ಕಡಿಯುವ ಯಂತ್ರ ಶಕ್ತಿಮಾನ್‍ಗೆ ನುರಿತ ಚಾಲಕರ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ ಚುನಾವಣೆ ನೀತಿಸಂಹಿತೆ ಮುಗಿದ ಬಳಿಕ ನುರಿತ ಚಾಲಕನನ್ನು ನೇಮಕ ಮಾಡುತ್ತೇವೆ. ಮರ ಕಟಾವು ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.







