ಚಿನ್ನ ಗೆದ್ದು ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆದ ಅಭಿಷೇಕ್ ವರ್ಮಾ
ಶೂಟಿಂಗ್ ವಿಶ್ವಕಪ್

ಬೀಜಿಂಗ್, ಎ.27: ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಅಭಿಷೇಕ್ ವರ್ಮಾ ಚಿನ್ನದ ಪದಕ ಜಯಿಸಿದರು. ಈ ಸಾಧನೆಯ ಮೂಲಕ ಮುಂಬರುವ ಒಲಿಂಪಿಕ್ ಗೇಮ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತದ ಐದನೇ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದೇ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋಟ್ಸ್‌ರ್ ಫೆಡರೇಶನ್(ಐಎಸ್‌ಎಸ್‌ಎಫ್)ವಿಶ್ವಕಪ್‌ನ ಫೈನಲ್‌ನಲ್ಲಿ ಸ್ಪರ್ಧಿಸಿದ ಅಭಿಷೇಕ್ ಒಟ್ಟು 242.7 ಅಂಕ ಕಲೆ ಹಾಕಿ ಮೊದಲ ಸ್ಥಾನ ಪಡೆದರು. 8 ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ ರಶ್ಯದ ಅರ್ಟೆಮ್ ಚೆರ್ನೊಸೊವ್(240.4)ಬೆಳ್ಳಿ ಹಾಗೂ ಕೊರಿಯಾದ ಸೆವುಂಗ್‌ವೂ ಹ್ಯಾನ್ ಕಂಚು(220.0)ಜಯಿಸಿದರು. ಅಭಿಷೇಕ್ ತಾನಾಡಿದ ಮೊದಲ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಭಾರತೀಯರು 2020ರ ಟೋಕಿಯೊ ಒಲಿಂಪಿಕ್ಸ್‌ನ ಐದು ಕೋಟಾ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದು, ಈ ವರ್ಷಾರಂಭದಲ್ಲಿ ಹೊಸದಿಲ್ಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನ 10 ಮೀ. ಏರ್ ಪಿಸ್ತೂಲ್ ಇವೆಂಟ್‌ನಲ್ಲಿ ಯುವ ಶೂಟರ್ ಸೌರಭ್ ಚೌಧರಿ ಒಲಿಂಪಿಕ್ಸ್‌ಗೆ ತನ್ನ ಸ್ಥಾನ ಖಚಿತಪಡಿಸಿಕೊಂಡಿದ್ದರು. ಅಭಿಷೇಕ್ ವರ್ಮಾ ಹೊಸದಿಲ್ಲಿಯಲ್ಲಿ ಚೊಚ್ಚಲ ವಿಶ್ವಕಪ್ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಫೈನಲ್‌ಗೆ ತಲುಪಲು ವಿಫಲರಾಗಿದ್ದರು.
ಚೀನಾ ರಾಜಧಾನಿಯಲ್ಲಿ ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಒಟ್ಟು 585 ಅಂಕ ಗಳಿಸಿದ ಅಭಿಷೇಕ್ ನಾಲ್ಕನೇ ಸ್ಥಾನ ಪಡೆದು ಫೈನಲ್‌ಗೆ ತೇರ್ಗಡೆಯಾದರು. ಶಹಝಾರ್ ರಿಝ್ವಿ ಹಾಗೂ ಅರ್ಜುನ್ ಸಿಂಗ್ ಚೀನಾ ಕ್ರಮವಾಗಿ 32ನೇ ಹಾಗೂ 54ನೇ ಸ್ಥಾನ ಪಡೆದರು. ಅಭಿಷೇಕ್ ಫೈನಲ್‌ಗೆ ತಲುಪಿದ ಭಾರತದ ಏಕೈಕ ಶೂಟರ್ ಎನಿಸಿಕೊಂಡರು. ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಪರ ಮೊದಲ ಬಾರಿ ಆಡಿದ್ದ ಅಭಿಷೇಕ್ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿ ಗಮನ ಸೆಳೆದಿದ್ದರು. ಆಗ ಅವರಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನುಭವವಿರಲಿಲ್ಲ.
ಶುಕ್ರವಾರ ರಾಜಸ್ಥಾನದ 17ರ ಹರೆಯದ ಯುವ ಶೂಟರ್ ದಿವ್ಯಾಂಶ್ ಸಿಂಗ್ ಪನ್ವಾರ್ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು. ಈ ಮೂಲಕ ಒಲಿಂಪಿಕ್ಸ್‌ಗೆ ಸ್ಥಾನ ಪಡೆದ ಭಾರತದ ನಾಲ್ಕನೇ ಶೂಟರ್ ಎನಿಸಿಕೊಂಡಿದ್ದರು. ಅಂಜುಂ ವೌದ್ಗಿಲ್ ಹಾಗೂ ಅಪೂರ್ವಿ ಚಾಂಡೇಲಾ(ಇಬ್ಬರೂ 10 ಮೀ. ಏರ್ ರೈಫಲ್ ಸ್ಪರ್ಧಿಗಳು), ಸೌರಭ್ ಚೌಧರಿ(10 ಮೀ. ಏರ್ ಪಿಸ್ತೂಲ್)ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಈ ವರ್ಷಾರಂಭದಲ್ಲಿ ನಡೆದ ವಿಶ್ವಕಪ್ ವೇಳೆ 2020ರ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.







