ಬದುಕಿನ ದಾರಿಯಲಿ ಭಾವಗಳ ಕಾರು

ಚಿತ್ರ: ಪ್ರೀಮಿಯರ್ ಪದ್ಮಿನಿ
ತಾರಾಗಣ: ಜಗ್ಗೇಶ್, ಮಧು, ಸುಧಾರಾಣಿ
ನಿರ್ದೇಶನ: ರಮೇಶ್ ಇಂದಿರಾ ನಿರ್ಮಾಣ: ಶ್ರುತಿ ನಾಯ್ಡು
ಪ್ರೀಮಿಯರ್ ಪದ್ಮಿನಿ ಎನ್ನುವುದು ಒಂದು ಕಾರು ಮಾತ್ರವಲ್ಲ, ಜೀವನ ಕಲಿಸುವ ತೇರಾಗಿ ಹೇಗೆ ಬದಲಾಗುತ್ತದೆ ಎಂದು ತೋರಿಸುವ ಚಿತ್ರ ಇದು.
ಚಿತ್ರದಲ್ಲಿ ನಾಯಕನ ಮನೆಯ ಹೆಸರು ನೆಮ್ಮದಿ. ಆದರೆ ಅದು ನೆಮ್ಮದಿ ಕಳೆದುಕೊಂಡ ಮನೆ ಎನ್ನುವಲ್ಲಿಂದಲೇ ಸಿನೆಮಾ ಆರಂಭ. ನಾಯಕ ವಿನಾಯಕ ವಿಚ್ಛೇದಿತನಾಗಲು ತಯಾರಾಗಿರುವ ಪತಿ. ಆತನ ಪತ್ನಿಕೂಡ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿರುತ್ತಾಳೆ. ಮನೆ ಬಿಟ್ಟಿರುವ ಮಗ ಮತ್ತು ಮನಸು ತೊರೆದಿರುವ ಪತ್ನಿಯ ನಡುವೆ ವಿನಾಯಕನಿಗೆ ಇಬ್ಬರು ಆತ್ಮೀಯರು ಸಿಗುತ್ತಾರೆ. ಒಬ್ಬರು ಆತನಿದ್ದ ಫ್ಲಾಟ್ ನಲ್ಲೇ ಇರುವ ಸ್ಪಂದನಾ. ಮತ್ತೊಬ್ಬರು ಆತನ ಪ್ರೀಮಿಯರ್ ಪದ್ಮಿನಿ ಕಾರ್‌ಗೆ ಚಾಲಕರಾಗಿ ಬರುವ ಡ್ರೈವರ್ ನಂಜುಂಡಿ.
ಚಿತ್ರದ ಮೊದಲಾರ್ಧದಲ್ಲಿ ವಿನಾಯಕನ ಬದುಕಿನ ಅನಾವರಣ ಇದ್ದರೆ, ಮಧ್ಯಂತರದ ಬಳಿಕ ನಂಜುಂಡಿಯ ನಾಡಿಗೆ ಹೋಗುವ ವಿನಾಯಕನಿಗೆ ಕಾಣಿಸುವ ಆತನ ಬದುಕು ಇರುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಮೊದಲಾರ್ಧ ಪದ್ಮಿನಿ ಎನ್ನುವ ಕಾರಿನೊಂದಿಗೆ ಬೆಳೆದ ನಂಟನ್ನು ಹೇಳಿದರೆ, ದ್ವಿತೀಯಾರ್ಧ ಪದ್ಮಿನಿ ಎನ್ನುವ ಮಹಿಳೆಯ ಬದುಕನ್ನು ಗ್ರೇಟ್ ಆಗಿಸಿದ ಬಗ್ಗೆ ಹೇಳುತ್ತದೆ. ಬದುಕನ್ನು ಬದುಕಿನಂತೆಯೇ ತೆರೆದಿಟ್ಟಿರುವ ಚಿತ್ರ ಇದು. ಜಗ್ಗೇಶ್ ಸಿನೆಮಾಗಳಲ್ಲಿ ನಿಜವಾದ ವೈವಿಧ್ಯತೆಯನ್ನು ಕಂಡದ್ದು ಮಠ ಚಿತ್ರದ ಬಳಿಕ. ನೀರ್ ದೋಸೆಯಲ್ಲಿ ಕೂಡ ಮತ್ತೊಂದು ಶೈಲಿಯ ನಟನೆಯನ್ನು, ಕತೆಯನ್ನು ಕಂಡಿದ್ದೇವೆ. ಅದರ ಮುಂದುವರಿದ ಆದರೆ ಅದಕ್ಕಿಂತಲೂ ವಿಭಿನ್ನವಾದ ಬಾಳಿನ ಪಯಣವನ್ನು ಪ್ರೀಮಿಯರ್ ಪದ್ಮಿನಿ ಚಿತ್ರ ನಮ್ಮೆದುರು ತೆರೆದಿಡುತ್ತದೆ.
ವಿನಾಯಕನಾಗಿ ಜಗ್ಗೇಶ್ ತಮ್ಮ ಮ್ಯಾನರಿಸಮ್ ಗಳನ್ನು ಬದಿಗೆ ಸರಿಸಿ ನಟಿಸಿದ್ದಾರೆ. ದತ್ತಣ್ಣನ ಕಾಂಬಿನೇಶನ್ ಮತ್ತೊಮ್ಮೆ ನೀರ್ ದೋಸೆ ಚಿತ್ರದ ಬಗ್ಗೆ ನೆನಪಿಸುತ್ತಲೇ, ಅದರಿಂದಾಚೆ ನಮ್ಮನ್ನು ಕರೆದು ತರಲು ಸಹಾಯ ಮಾಡುತ್ತದೆ. ವಿನಾಯಕನಿಂದ ವಿಚ್ಛೇದನ ಪಡೆಯುವ ಪತ್ನಿಯಾಗಿ ಮಧು ಅಭಿನಯಿಸಿದ್ದಾರೆ. ಸ್ಪಂದನಾ ಪಾತ್ರದಲ್ಲಿ ಸುಧಾರಾಣಿ ಲವಲವಿಕೆ ತುಂಬಿದ್ದಾರೆ.
ಡ್ರೈವರ್ ನಂಜುಂಡಿಯ ಪಾತ್ರದಲ್ಲಿ ಪ್ರಮೋದ್ ಭರವಸೆಯ ನಟನೆ ನೀಡಿದ್ದಾರೆ. ಅವರು ನಟ ದರ್ಶನ್ ಅವರನ್ನು ನೆನಪಿಸುವುದು ವಿಶೇಷ. ಯುವ ಸ್ನೇಹಿತರಾಗಿ ರಂಜಿನಿ ಮತ್ತು ಸುಮುಖ್ ಪಾತ್ರಗಳನ್ನು ನಿರ್ವಹಿಸಿರುವಂಥ ಹಿತಾ ಚಂದ್ರಶೇಖರ್ ಮತ್ತು ವಿವೇಕ್ ಸಿಂಹ ಎಂಬ ಯುವನಟನ ಜೋಡಿ ಆಕರ್ಷಕ. ಹಿತಾ ಎಂಥ ಪಾತ್ರಗಳಿಗೂ ಜೀವ ತುಂಬಬಲ್ಲೆ ಎಂದು ಸಾಬೀತು ಪಡಿಸಿದ್ದಾರೆ. ವಿವೇಕ್ ಸಿಂಹ ಕೆಲವು ಕಡೆಗಳಲ್ಲಿ ನಟ ವಿಜಯ ರಾಘವೇಂದ್ರನನ್ನು ಹೋಲುತ್ತಾರೆ. ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಭಾರ್ಗವಿ ನಾರಾಯಣ್ ಮನದಲ್ಲಿ ಉಳಿಯುತ್ತಾರೆ. ಮನಸ್ಸಿಗೆ ತಾಕುವಂಥ ಸಂಭಾಷಣೆಗಳು ಮತ್ತು ಕತೆಯ ಓಘಕ್ಕೆ ಹೊಂದಿಕೊಂಡಂತೆ ಸಾಗುವ ಛಾಯಾಗ್ರಹಣ ಚಿತ್ರಕ್ಕೆ ಬಲ ನೀಡಿದೆ. ನಮ್ಮೋರು ಅನಿಸಿಕೊಂಡೋರು ನಮ್ಮ ಜೊತೆಯಲ್ಲೇ ಇರಬೇಕು ಎಂದೇನೂ ಇಲ್ಲ. ಯಾರು ನಮ್ಮ ಜೊತೆಗೆ ಇರುತ್ತಾರೋ ಅವರೇ ನಮ್ಮೋರು ಎಂಬ ಮಾತುಗಳು ಮನಸ್ಸಿಗೆ ನಾಟುವಂತಿವೆ.
ಟಿಪಿಕಲ್ ಮಂಡ್ಯ ಹೈದನಾಗಿ, ಅದೇ ಮಾತುಗಳನ್ನಾಡುವ ದಾನಪ್ಪ ಮತ್ತು ಧೀಮಂತ ಹೆಣ್ಣು ಮಗಳು ಪದ್ಮಿನಿಯಾಗಿ ಕೃತಿ ಶೆಟ್ಟಿ ನಿರ್ವಹಿಸಿರುವ ಪಾತ್ರಗಳು ಜೀವಂತವಾಗಿ ಉಳಿಯುತ್ತವೆ. ಹಳ್ಳಿ ನೀಡುವ ಬದುಕಿನ ಪಾಠವನ್ನು ನಗರ ನೀಡುವುದಿಲ್ಲ ಎಂಬ ತಣ್ಣನೆಯ ಸಂದೇಶ ಬದುಕಿಗೆ ಸಣ್ಣದೊಂದು ಎಚ್ಚರಿಕೆಯೂ ಹೌದು. ಸಂಗೀತದ ವಿಚಾರದಲ್ಲಿಯೂ ಉತ್ತಮವಾಗಿ ಮೂಡಿ ಬಂದಿರುವ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೆ ಆಪ್ತವಾಗುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ತಪ್ಪೇನಿಲ್ಲ.







