ಅರ್ಜುನ ಪ್ರಶಸ್ತಿಗೆ ಬಿಸಿಸಿಐನಿಂದ ಬುಮ್ರಾ, ಶಮಿ, ಜಡೇಜ, ಪೂನಮ್ ಹೆಸರು ಶಿಫಾರಸು

ಹೊಸದಿಲ್ಲಿ, ಎ.27: ಭಾರತ ಕ್ರಿಕೆಟ್ ತಂಡದ ವೇಗಿಗಳಾದ ಮುಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಆಲ್‌ರೌಂಡರ್ ರವೀಂದ್ರ ಜಡೇಜ ಹಾಗೂ ಮಹಿಳಾ ತಂಡದ ಪೂನಮ್ ಯಾದವ್‌ರನ್ನು ಶನಿವಾರ ಅರ್ಜುನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆ. ದಿಲ್ಲಿಯಲ್ಲಿ ನಡೆದ ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಗಾರರ ಸಮಿತಿ (ಸಿಒಎ) ಈ ಕುರಿತು ಸಭೆ ಸೇರಿ ನಿರ್ಧಾರ ತೆಗೆದುಕೊಂಡಿದೆ.
25 ವರ್ಷದ ಬುಮ್ರಾ ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದು, ಭಾರತ ತಂಡದ ಎಲ್ಲ ಮಾದರಿ ಕ್ರಿಕೆಟ್‌ನ ಪ್ರಮುಖ ಬೌಲರ್ ಆಗಿದ್ದಾರೆ. ಮುಂಬರುವ ವಿಶ್ವಕಪ್‌ನಲ್ಲಿ ಅವರು ಭಾರತದ ಬೌಲಿಂಗ್ ಪಡೆಯನ್ನು ಮುನ್ನಡೆಸುವರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಶಮಿ ಕೂಡ ಮುಂಚೂಣಿಯಲ್ಲಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಮರಳಿರುವ ಜಡೇಜ ಅವರು ವಿಶ್ವಕಪ್‌ಗೆ ಪ್ರಕಟಿಸಲಾದ 15 ಸದಸ್ಯರ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
27 ವರ್ಷ ವಯಸ್ಸಿನ ಲೆಗ್ ಸ್ಪಿನ್ನರ್ ಪೂನಮ್ ಯಾದವ್ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಾಲ್ಕನೇ ಹೆಸರು. 41 ಏಕದಿನ ಪಂದ್ಯಗಳಿಂದ 63 ವಿಕೆಟ್ ಕಿತ್ತಿರುವ ಅವರು, 54 ಟಿ20 ಪಂದ್ಯಗಳಿಂದ 74 ವಿಕೆಟ್ ಗಳಿಸಿದ್ದಾರೆ.
►ಎಐಎಫ್‌ಎಫ್‌ನಿಂದ ಗುರುಪ್ರೀತ್, ಲಾಲ್‌ಪೆಕ್ಲುವಾ ಹೆಸರು
![]()
ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್‌ಎಫ್) ಕೂಡ ಸ್ಟಾರ್ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಹಾಗೂ ಸ್ಟ್ರೈಕರ್ ಜೇಜೆ ಲಾಲ್‌ಪೆಕ್ಲುವಾ ಅವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶನಿವಾರ ಶಿಫಾರಸು ಮಾಡಿದೆ. ಈ ಇಬ್ಬರ ಹೆಸರುಗಳನ್ನು ಎರಡನೇ ಬಾರಿ ಎಐಎಫ್‌ಎಫ್ ನಾಮನಿರ್ದೇಶನ ಮಾಡಿದೆ. 2017ರಲ್ಲಿ ಭಾರತ ಮಹಿಳಾ ಫುಟ್ಬಾಲ್ ತಂಡದ ನಾಯಕಿ ಬೆಂಬೆಮ್ ದೇವಿ ಹಾಗೂ ಈ ಇಬ್ಬರು ಹೆಸರುಗಳು ಶಿಫಾರಸುಗೊಂಡಿದ್ದವು. ಆದರೆ ಬೆಂಬೆಮ್ ದೇವಿಗೆ ಪ್ರಶಸ್ತ್ತಿ ಒಲಿದಿತ್ತು. ಅರ್ಜುನ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಸುನೀಲ್ ಚೆಟ್ರಿ ಬಳಿಕ ರಾಷ್ಟ್ರೀಯ ತಂಡದಲ್ಲಿ ದೀರ್ಘ ಅವಧಿಗೆ ಗುರುಪ್ರೀತ್ ಹಾಗೂ ಜೇಜೆ ಸೇವೆ ಸಲ್ಲಿಸಿದ್ದಾರೆ. ಸಂಧು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಪರ ಆಡುತ್ತಾರೆ. ಸುನೀಲ್ ಚೆಟ್ರಿ ಬಳಿಕ ಏಶ್ಯಕಪ್‌ನಲ್ಲಿ ಆಡಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ. ಇನ್ನು ಜೇಜೆ ಅವರು ಐಎಸ್‌ಎಲ್‌ನಲ್ಲಿ ಚೆನ್ನೈಯಿನ್ ಎಫ್‌ಸಿ ಪರ ಆಡುತ್ತಿದ್ದು, 2011ರಿಂದ ಭಾರತದ ರಾಷ್ಟ್ರೀಯ ತಂಡದಲ್ಲಿ ಇದ್ದಾರೆ.








