ರಫೆಲ್ ನಡಾಲ್ ಸೆಮಿ ಫೈನಲ್‌ಗೆ
ಬಾರ್ಸಿಲೋನ ಓಪನ್

ಬಾರ್ಸಿಲೋನ, ಎ.27: ಬಾರ್ಸಿಲೋನ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿರುವ ಸ್ಪೇನ್ ಸ್ಟಾರ್ ಆಟಗಾರ ರಫೆಲ್ ನಡಾಲ್ ಒಂದೇ ಟೂರ್ನಿಯಲ್ಲಿ 12 ಬಾರಿ ಪ್ರಶಸ್ತಿ ಜಯಿಸಿ ಎಟಿಪಿ ದಾಖಲೆ ನಿರ್ಮಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಡಾಲ್ ಅವರು ಜಾನ್-ಲೆನ್ನಾರ್ಡ್ ಸ್ಟ್ರರ್ಫ್‌ರನ್ನು 7-5, 7-5 ನೇರ ಸೆಟ್‌ಗಳಿಂದ ಮಣಿಸಿದರು. ಸೆಮಿ ಫೈನಲ್‌ನಲ್ಲಿ 2017ರ ಫೈನಲಿಸ್ಟ್ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ. ಥೀಮ್ ಅರ್ಜೆಂಟೀನದ ಗುಡೊ ಪೆಲ್ಲಾರನ್ನು 7-5, 6-2 ಅಂತರದಿಂದ ಮಣಿಸಿದರು. ನಡಾಲ್ ಇದೇ ಮೊದಲ ಬಾರಿ ಸ್ಟ್ರಫ್‌ರನ್ನು ಮುಖಾಮುಖಿಯಾದರು. ‘‘ಯಾವುದೇ ಆಟಗಾರನ ವಿರುದ್ಧ ಮೊದಲ ಬಾರಿ ಸ್ಪರ್ಧಿಸುವುದು ತುಂಬಾ ಕಷ್ಟಕರ. ಇಂದು ನನ್ನ ಸರ್ವ್ ಶಕ್ತಿಯುತವಾಗಿತ್ತು. ನನ್ನ ಪಂದ್ಯದಲ್ಲಿ ಸುಧಾರಣೆಯಾಗಿದ್ದು, ಇನ್ನಷ್ಟು ಉತ್ತಮಪಡಿಸಿಕೊಳ್ಳುವ ವಿಶ್ವಾಸವಿದೆ’’ ಎಂದು ಸ್ಪೇನ್‌ನ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಹೇಳಿದ್ದಾರೆ. ಜಪಾನ್ ಆಟಗಾರ ಕೀ ನಿಶಿಕೊರಿ ಎದುರಾಳಿ ರಾಬರ್ಟೊ ಕಾರ್ಬಲೆಸ್‌ರನ್ನು 6-4, 7-5 ಅಂತರದಿಂದ ಮಣಿಸಿ ನಾಲ್ಕನೇ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು. ನಿಶಿಕೊರಿ ಮುಂದಿನ ಸುತ್ತಿನಲ್ಲಿ ರಶ್ಯದ ಡೇನಿಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ. ಮಡ್ವೆಡೆವ್ ಚಿಲಿಯ ನಿಕೊಲಸ್ ಜರ್ರಿ ಅವರನ್ನು 6-3, 6-4 ಸೆಟ್‌ಗಳಿಂದ ಮಣಿಸಿದರು.





