ಹೈದರಾಬಾದ್ ವಿರುದ್ಧ ರಾಜಸ್ಥಾನ ಜಯದ ನಗೆ
ಸಂಜು ಸ್ಯಾಮ್ಸನ್ ಅರ್ಧಶತಕದ ಕೊಡುಗೆ

ಜೈಪುರ, ಎ.27: ಎಲ್ಲ ವಿಭಾಗಗಳಲ್ಲೂ ಪರಿಣಾಮಕಾರಿ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ಸ್ ತಂಡ ಇಲ್ಲಿಯ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ 45ನೇ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ್ನು 7 ವಿಕೆಟ್‌ಗಳಿಂದ ಮಣಿಸಿದೆ.
ವಿಲಿಯಮ್ಸನ್ ಪಡೆ ನೀಡಿದ 161 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 19.1 ಓವರ್‌ಗಳಲ್ಲಿ ಜಯದ ರನ್ ಗಳಿಸಿ ಬೀಗಿತು.
ರಾಜಸ್ಥಾನ ಪರ ಅಜಿಂಕ್ಯಾ ರಹಾನೆ (39, 34 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (44, 26 ಎಸೆತ, 4 ಬೌಂಡರಿ, 3 ಸಿಕ್ಸರ್) ಮೊದಲ ವಿಕೆಟ್‌ಗೆ 78 ರನ್‌ಗಳ ಜೊತೆಯಾಟದಿಂದ ಉತ್ತಮ ಆರಂಭ ಒದಗಿಸಿದರು. ರಶೀದ್ ಖಾನ್ ಎಸೆತದಲ್ಲಿ ಲಿಯಾಮ್ ವಿಕೆಟ್ ಒಪ್ಪಿಸಿದರೆ, ಶಕೀಬ್ ಅಲ್ ಹಸನ್‌ಗೆ ರಹಾನೆ ಬಲಿಯಾದರು. ನಾಯಕ ಸ್ಟೀವ್ ಸ್ಮಿತ್ (22, 16 ಎಸೆತ, 3 ಬೌಂಡರಿ) ಅಲ್ಪ ಕಾಣಿಕೆ ನೀಡಿದರು.
ಕೊನೆಯಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (48, 32 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಅಶ್ಟನ್ ಟರ್ನರ್ (3) ಗೆಲುವಿನ ವಿಧಾನ ಪೂರೈಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಹೈದರಾಬಾದ್ ಪರ ಬ್ಯಾಟಿಂಗ್ ಆರಂಭಿಸಿದ ವಾರ್ನರ್ (37, 32 ಎಸೆತ) ಹಾಗೂ ನಾಯಕ ಕೇನ್ ವಿಲಿಯಮ್ಸ್ಸನ್ (13, 14 ಎಸೆತ, 2 ಬೌಂಡರಿ) ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 28 ರನ್ ಸೇರಿಸಿದರು. ಈ ವೇಳೆ ವಿಲಿಯಮ್ಸನ್‌ರನ್ನು ಕನ್ನಡಿಗ ಶ್ರೇಯಸ್ ಗೋಪಾಲ್ ಬೌಲ್ಡ್ ಮಾಡಿದರು. ಆ ಬಳಿಕ ವಾರ್ನರ್ ಜೊತೆಗೂಡಿದ ಪಾಂಡೆ (61, 36 ಎಸೆತ, 9 ಬೌಂಡರಿ) ರಾಜಸ್ಥಾನ ಬೌಲರ್‌ಗಳ ಎದುರು ಅಬ್ಬರಿಸತೊಡಗಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿ 71 ರನ್ ಸೇರಿಸಿ ತಂಡಕ್ಕೆ ಆಸರೆಯಾಯಿತು. ವಾರ್ನರ್ ಅವರು ಓಶಾನೆ ಥಾಮಸ್ ಎಸೆತದಲ್ಲಿ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಪಾಂಡೆಗೆ ಗೋಪಾಲ್ ಪೆವಿಲಿಯನ್ ದಾರಿ ತೋರಿಸಿದರು. ಆ ಬಳಿಕ ಬ್ಯಾಟಿಂಗ್‌ಗೆ ಬಂದ ಆಲ್‌ರೌಂಡರ್ ವಿಜಯಶಂಕರ್ (8) ವಿಫಲರಾದರು. ಹೈದರಾಬಾದ್ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ದೀಪಕ್ ಹೂಡಾ ಶೂನ್ಯ ಸುತ್ತಿದರು. ವೃದ್ಧಿಮಾನ್ ಸಹಾ (5) ಮಿಂಚಲಿಲ್ಲ. ಶಕೀಬ್ ಅಲ್ ಹಸನ್ (9) ಅಲ್ಪಮೊತ್ತ ಗಳಿಸಿದರು. ರಶೀದ್ ಖಾನ್ ಕೊನೆಯಲ್ಲಿ 17 ರನ್ ಗಳಿಸಿದರು.
ರಾಜಸ್ಥಾನ ಪರ ಉನಾದ್ಕತ್ (26ಕ್ಕೆ 2), ಗೋಪಾಲ್ (28ಕ್ಕೆ 2), ಥಾಮಸ್ (28ಕ್ಕೆ 2) ಹಾಗೂ ಆ್ಯರೊನ್ (36ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.







