2 ವೋಟರ್ ಐಡಿ ಆರೋಪದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

ಹೊಸದಿಲ್ಲಿ,ಎ.28: ತನ್ನ ಬಳಿ ಎರಡು ಮತದಾರರ ಗುರುತಿನ ಚೀಟಿಗಳಿವೆ ಎಂದು ಆರೋಪಿಸಿರುವ ಆಪ್ ಗೆ ರವಿವಾರ ತಿರುಗೇಟು ನೀಡಿದ ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು,ಆಪ್ ಬಳಿ ಜನರಿಗಾಗಿ ಯಾವುದೇ ದೂರದೃಷ್ಟಿ ಇಲ್ಲವಾದ್ದರಿಂದ ಅದು ತನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಗಂಭೀರ್ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ ಚುನಾವಣೆಯಲ್ಲಿ ಅವರ ಎದುರಾಳಿಯಾಗಿರುವ ಆಪ್‌ನ ಅತಿಷಿ ಅವರು ದಿಲ್ಲಿಯ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದು,ಮೇ 1ರಂದು ವಿಚಾರಣೆ ನಡೆಯಲಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗಂಭೀರ್,ದಿಲ್ಲಿಯ ರಾಜೇಂದರ್ ನಗರದಿಂದ ಪಡೆದಿರುವ ಒಂದೇ ಮತದಾರರ ಗುರುತು ಚೀಟಿ ತನ್ನ ಬಳಿಯಿದೆ. ತಾನು ಬಾಲ್ಯದಲ್ಲಿ ಕರೋಲಬಾಗ್‌ನಲ್ಲಿರುವ ತಾತನ ಮನೆಯಲ್ಲಿದ್ದೆ. ಆದರೆ ತಾನೆಂದೂ ಅಲ್ಲಿ ಮತ ಚಲಾಯಿಸಿಲ್ಲ,ಮತದಾರರ ಗುರುತಿನ ಚೀಟಿಗಾಗಿ ಅರ್ಜಿಯನ್ನೂ ಸಲ್ಲಿಸಿರಲಿಲ್ಲ ಎಂದು ತಿಳಿಸಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮತದಾರರ ಕುರಿತು ಮಾತನಾಡಲು ಆಪ್ ಅಭ್ಯರ್ಥಿಯ ಬಳಿ ಯಾವುದೇ ವಿಷಯವಿಲ್ಲ,ಹೀಗಾಗಿ ಅವರು ತನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದ ಗಂಭೀರ್,ತಾನು ಧನಾತ್ಮಕ ರಾಜಕೀಯದಲ್ಲಿ ನಂಬಿಕೆಯನ್ನು ಹೊಂದಿದ್ದೇನೆ ಮತ್ತು ಪೂರ್ವ ದಿಲ್ಲಿ ಕ್ಷೇತ್ರವನ್ನು ದಿಲ್ಲಿಯ ಅತ್ಯುತ್ತಮ ಲೋಕಸಭಾ ಕ್ಷೇತ್ರಗಳಲ್ಲಿ ಒಂದನ್ನಾಗಿ ಮಾಡುವ ದೂರದೃಷ್ಟಿಯೊಂದಿಗೆ ಪ್ರಚಾರವನ್ನು ನಡೆಸುತ್ತೇನೆ ಹಾಗೂ ಚುನಾವಣೆಯಲ್ಲಿ ತನ್ನ ಎದುರಾಳಿಗಳೊಂದಿಗೆ ಆರೋಪ-ಪ್ರತ್ಯಾರೋಪಗಳ ಆಟದಲ್ಲಿ ತೊಡಗುವುದಿಲ್ಲ ಎಂದರು.







