ನಿರುದ್ಯೋಗ ಈಗಲೂ ಮತದಾರರ ಮುಖ್ಯ ಕಳವಳದ ವಿಷಯ
ಸಿವೋಟರ್-ಐಎಎನ್‌ಎಸ್ ಸಮೀಕ್ಷೆ

ಹೊಸದಿಲ್ಲಿ,ಎ.28: ಜನರು ಭದ್ರತೆಗಿಂತ ಆರ್ಥಿಕ ವಿಷಯಗಳ ಬಗ್ಗೆ ಹೆಚ್ಚು ಚಿಂತೆಯಲ್ಲಿರುವುದರಿಂದ ನಿರುದ್ಯೋಗವು ಮತದಾರರಲ್ಲಿ ಮುಖ್ಯ ಕಳವಳದ ವಿಷಯವಾಗಿ ಉಳಿದುಕೊಂಡಿದೆ ಎಂದು ಸಿವೋಟರ್-ಐಎಎನ್‌ಎಸ್ ನಡೆಸಿರುವ ಸಮೀಕ್ಷೆಯು ಬೆಟ್ಟುಮಾಡಿದೆ.
ಎ.26ರಂದು ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಶೇ.28.42ರಷ್ಟು ಜನರು ನಿರುದ್ಯೋಗವನ್ನು ತಮ್ಮ ಮುಖ್ಯ ಕಳವಳವನ್ನಾಗಿ ಗುರುತಿಸಿದ್ದಾರೆ. 11,672 ಜನರನ್ನೊಳಗೊಂಡ ಸ್ಯಾಂಪಲ್ ಸರ್ವೆಯಲ್ಲಿ ಶೇ.57.04ರಷ್ಟು ಜನರು ಆರ್ಥಿಕ ವಿಷಯಗಳು ದೇಶದ ಪ್ರಮುಖ ಸಮಸ್ಯೆಗಳಾಗಿವೆ ಎಂದು ಭಾವಿಸಿದರೆ, ಶೇ.11.74ರಷ್ಟು ಜನರು ಭದ್ರತಾ ಕಳವಳಗಳು ಮುಖ್ಯ ಚಿಂತೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುವ ಮೊದಲೂ ನಿರುದ್ಯೋಗವು ಅಗ್ರ ಕಳವಳದ ವಿಷಯವಾಗಿತ್ತು. ಆದರೆ ಮಾರ್ಚ್ ಮಧ್ಯದಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಭದ್ರತೆ ಮತ್ತು ಆರ್ಥಿಕ ಸಮಸ್ಯೆಗಳ ಕುರಿತ ಕಳವಳಗಳು ಹೆಚ್ಚುಕಡಿಮೆ ಸಮಾನ ಪ್ರಮಾಣದಲ್ಲಿ ವ್ಯಕ್ತವಾಗಿದ್ದವು.
ಮಾರ್ಚ್ ಮೊದಲ ವಾರದಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಭಯೋತ್ಪಾದಕ ದಾಳಿಗಳು ಮತದಾರರಲ್ಲಿ ಆರ್ಥಿಕ ವಿಷಯಗಳಿಗಿಂತ ಹೆಚ್ಚಿನ ಕಳವಳಗಳನ್ನು ಸೃಷ್ಟಿಸಿದ್ದವು. ಸಮೀಕ್ಷೆಗೊಳಪಟ್ಟವರಲ್ಲಿ ಶೇ.26.12 ಜನರು ಭಯೋತ್ಪಾದಕ ದಾಳಿಗಳನ್ನು ಮತ್ತು ಶೇ.21.74 ಜನರು ನಿರುದ್ಯೋಗವನ್ನು ತಮ್ಮ ಮುಖ್ಯ ಕಳವಳಗಳು ಎಂದು ಗುರುತಿಸಿದ್ದರು.
ನಿರುದ್ಯೋಗದ ಸವಾಲಿನ ಮುಂದೆ ಭದ್ರತೆ ಕುರಿತ ಕಳವಳಗಳು ಕ್ರಮೇಣ ಕಡಿಮೆಯಾಗಿವೆ. ಎ.26ರಂದು ನಡೆಸಿದ್ದ ಸಮೀಕ್ಷೆಯಲ್ಲಿ ಆರ್ಥಿಕ ವಿಷಯಗಳು ಮತ್ತು ಭದ್ರತಾ ವಿಷಯಗಳ ಕುರಿತು ಕಳವಳಗಳ ಪ್ರಮಾಣದಲ್ಲಿ 45.3 ಶೇಕಡಾ ಅಂಕಗಳಷ್ಟು ವ್ಯತ್ಯಾಸವಿದ್ದು,ಭಾರೀ ಸಂಖ್ಯೆಯ ಜನರು ಆರ್ಥಿಕ ವಿಷಯಗಳು ತಮ್ಮ ಮುಖ್ಯ ಕಳವಳಗಳು ಎಂದು ಗುರುತಿಸಿದ್ದಾರೆ.
ರಾಜ್ಯಗಳಲ್ಲಿಯೂ ಸಮೀಕ್ಷೆಗಳನ್ನು ನಡೆಸಲಾಗಿದ್ದು,ಹೆಚ್ಚಿನ ರಾಜ್ಯಗಳಲ್ಲಿ ನಿರುದ್ಯೋಗ ಕುರಿತು ಕಳವಳ ಅಗ್ರಸ್ಥಾನದಲ್ಲಿದೆ.







