ಶ್ರೀಲಂಕಾ ಸ್ಫೋಟದ ಸೂತ್ರಧಾರಿಯ ತಂದೆ, ಇಬ್ಬರು ಸಹೋದರರು ಭದ್ರತಾಪಡೆಗಳ ಗುಂಡಿಗೆ ಬಲಿ

ಕೊಲಂಬೊ,ಎ.28: ಶ್ರೀಲಂಕಾದಲ್ಲಿ ಕಳೆದ ರವಿವಾರ ನಡೆದ ಸರಣಿ ಬಾಂಬ್ ಸ್ಫೋಟದ ಹಿಂದಿರುವ ಸೂತ್ರಧಾರಿಯೆಂದು ಶಂಕಿಸಲಾಗಿರುವ ಝಹ್ರಾನ್ ಹಾಶೀಂನ ತಂದೆ ಹಾಗೂ ಇಬ್ಬರು ಸಹೋದರರು, ಶುಕ್ರವಾರ ರಾತ್ರಿ ಕಲ್ಮುನೈ ಪಟ್ಟಣದಲ್ಲಿರುವ ಅವರ ಅಡಗುದಾಣದ ಮೇಲೆ ಭದ್ರತಾಪಡೆಗಳು ದಾಳಿ ನಡೆಸಿದ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ್ಲ ಪ್ರಚೋದನಕಾರಿ ಭಾಷಣದ ವಿಡಿಯೋವೊಂದರಲ್ಲಿ ಝೈನಿ ಹಶೀಂ, ರಿಲ್ವಾನ್ ಹಾಶಿಂ ಹಾಗೂ ಅವರ ತಂದೆ ಮುಹಮ್ಮದ್ ಹಾಶಿಂ ಕಾಣಿಸಿಕೊಂಡಿದ್ದರು. ಪೂರ್ವ ಕರಾವಳಿಯ ಕಲ್ಮುನೈ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸೇನೆಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ 15 ಮಂದಿಯಲ್ಲಿ ಈ ಮೂವರು ಕೂಡಾ ಸೇರಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಸ್ಟರ್ ರವಿವಾರದಂದು ಭೀಕರ ಬಾಂಬ್ ಸ್ಫೋಟ ನಡೆ ಬಳಿಕ ಶ್ರೀಲಂಕಾದಲ್ಲಿ ಈಗಲೂ ಕಟ್ಟೆಚ್ಚರ ಮುಂದುವರಿದಿದೆ. ಈ ದ್ವೀಪರಾಷ್ಟ್ರದುದ್ದಕ್ಕೂ ಸುಮಾರು 10 ಸಾವಿರ ಸೈನಿಕರನ್ನು ಶೋಧ ಕಾರ್ಯಾಚರಣೆಗಳನ್ನು ನಡೆಸಲು ನಿಯೋಜಿಸಲಾಗಿದೆ.
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿ ಈವರೆಗೆ ಭದ್ರತಾಪಡೆಗಳು ಸಿರಿಯ ಹಾಗೂ ಈಜಿಪ್ಟ್ ದೇಶಗಳಿಗೆ ಸೇರಿದವರೆನ್ನಲಾದ 100ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಂಡಿದೆ. ಈ ಮಧ್ಯೆ ಶ್ರೀಲಂಕಾದಲ್ಲಿ ಇನ್ನಷ್ಟು ಆತ್ಮಹತ್ಯಾ ಬಾಂಬರ್‌ಗಳು ತಲೆಮರೆಸಿಕೊಂಡಿದ್ದಾರೆಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ಈಸ್ಟರ್ ಬಾಂಬ್ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ. ಶುಕ್ರವಾರ ಕಲ್ಮುನೈ ಪಟ್ಟಣದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ವೇಳೆ ತನ್ನ ಮೂವರು ಸದಸ್ಯರು ತಮ್ಮನ್ನು ತಾವೇ ಸ್ಫೋಟಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು, ಭಯೋತ್ಪಾದಕ ಗುಂಪಿನ ಸುದ್ದಿಸಂಸ್ಥೆ ‘ಅಮಾಕ್’ ಹೇಳಿದೆ. ಈ ದಾಳಿಯಲ್ಲಿ 17 ಮಂದಿ ಪೊಲೀಸರು ಕೂಡಾ ಹತರಾಗಿದ್ದಾರೆಂದು ಅದು ತಿಳಿಸಿದೆ. ಆದರೆ ಶ್ರೀಲಂಕಾ ಸೇನೆ ಇದನ್ನು ನಿರಾಕರಿಸಿದೆ. ಕಲ್ಮುನೈನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ 12 ಮಂದಿಯಲ್ಲಿ ಆರು ಮಕ್ಕಳು ಕೂಡಾ ಸೇರಿದ್ದಾರೆಂದು ಪೊಲೀಸರು ತಿಳಿಸಿದ್ದರಾದರೂ ಈ ಬಗ್ಗೆ ಯಾವುದೇ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.







