ಐಎಎಫ್‌ನ ಮಾಜಿ ವಿಂಗ್ ಕಮಾಂಡರ್ ಪತ್ನಿಯ ಮೃತದೇಹ ಪತ್ತೆ

ಹೊಸದಿಲ್ಲಿ, ಎ. 27: ಭಾರತೀಯ ವಾಯು ಪಡೆಯ ಮಾಜಿ ವಿಂಗ್ ಕಮಾಂಡರ್ ಪತ್ನಿ ಮೃತದೇಹ ದಿಲ್ಲಿಯ ದ್ವಾರಕಾದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆಯರನ್ನು ಮೀನು ಜೈನ್ (52) ಎಂದು ಗುರುತಿಸಲಾಗಿದೆ. ಇವರು ದ್ವಾರಕ ಸೆಕ್ಟರ್ 7ರಲ್ಲಿರುವ ವಾಯು ಪಡೆಯ ನೌಕಾ ಅಧಿಕಾರಿಗಳ ಎಂಕ್ಲೇವ್‌ನ ನಿವಾಸಿ ಎಂದು ಅವರು ತಿಳಿಸಿದ್ದಾರೆ. ಮೀನಾ ಜೈನ್ ಅವರ ಪತಿ ವಿ.ಕೆ. ಜೈನ್ ಭಾರತೀಯ ವಾಯು ಪಡೆಯ ನಿವೃತ್ತ ವಿಂಗ್ ಕಮಾಂಡರ್. ಪ್ರಸ್ತುತ ಅವರು ಇಂಡಿಗೋದಲ್ಲಿ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯದಲ್ಲಿದ್ದ ವಿ.ಕೆ. ಜೈನ್ ಶುಕ್ರವಾರ ರಾತ್ರಿ ಮನೆಗೆ ತಲುಪಿದ್ದರು.
‘‘ಗುರುವಾರ ಸಂಜೆ ನನ್ನ ಪುತ್ರ ದರ್ಪಣ್ ಕರೆ ಮಾಡಿ ಮೀನು ಜೈನ್ ಅವರ ಆರೋಗ್ಯ ಸರಿಯಾಗಿಲ್ಲ ಎಂದು ನನಗೆ ತಿಳಿಸಿದ್ದ’’ ಎಂದು ಮೀನು ಅವರ ತಂದೆ 76 ಹರೆಯದ ಎಚ್.ಪಿ. ಗರ್ಗ್ ಹೇಳಿದ್ದಾರೆ. ಗರ್ಗ್ ಅವರು ತಮ್ಮ ಕಚೇರಿಯಿಂದ ಸಂಜೆ 7.45ಕ್ಕೆ ಹೊರಟರು. ದಾರಿಯಲ್ಲಿ ಮಗಳಿಗೆ ಕರೆ ಮಾಡಿದರು. ಮಗಳು ತಾನು ಆರೋಗ್ಯವಾಗಿರುವುದಾಗಿ ತಂದೆ ತಿಳಿಸಿದ್ದಳು. ಗರ್ಗ್ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮಗಳಿಗೆ ಮತ್ತೆ ಕರೆ ಮಾಡಿದರು. ಆದರೆ, ಕರೆ ತಲುಪುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಪುತ್ರ ದರ್ಪಣ್‌ನೊಂದಿಗೆ ಮಗಳ ಮನೆಗೆ ಬಂದರು. ಮನೆಯಲ್ಲಿ ಮೀನು ಜೈನ್ ಮಲಗುವ ಕೋಣೆಯಲ್ಲಿ ಅಪ್ರಜ್ಞಾಸ್ಥಿತಿಯಲ್ಲಿದ್ದರು. ಅವರನ್ನು ಕೂಡಲೇ ಸೆಕ್ಟರ್ 10ರ ಆಯುಷ್ಮಾನ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು.
ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







