ಪೊಲ್ಲಾಚಿ ಲೈಂಗಿಕ ಹಗರಣ: 8 ಮಂದಿ ವಿರುದ್ಧ 2 ಪ್ರಕರಣ ದಾಖಲಿಸಿದ ಸಿಬಿಐ

ಪೊಲ್ಲಾಚಿ (ತಮಿಳುನಾಡು), ಎ. 28: ಪೊಲ್ಲಾಚಿ ಲೈಂಗಿಕ ಕಿರುಕುಳ ಹಾಗೂ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಶುಕ್ರವಾರ 8 ಮಂದಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ಎಐಎಡಿಎಂಕೆಯೊಂದಿಗೆ ಆರೋಪಿಗಳಿಗೆ ನಂಟು ಇದೆ. ಪಕ್ಷ ಅವರನ್ನು ರಕ್ಷಿಸಲು ಹಾಗೂ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಆದುದರಿಂದ ನ್ಯಾಯಾಲಯದ ಪರಿವೀಕ್ಷಣೆಯಲ್ಲಿ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳ ಆಗ್ರಹದಂತೆ ತಮಿಳುನಾಡು ಸರಕಾರ ಮಾರ್ಚ್ 13ರಂದು ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ವಿದ್ಯಾರ್ಥಿನಿಯರೂ ಸೇರಿದಂತೆ ಮಹಿಳೆಯರಿಗೆ ಕಿರುಕುಳ ನೀಡಿದ ಹಾಗೂ ಅವರನ್ನು ಬ್ಲಾಕ್‌ಮೇಲ್ ಮಾಡಿದ ಆರೋಪದಲ್ಲಿ ಮಾರ್ಚ್‌ನಲ್ಲಿ 8 ಮಂದಿಯನ್ನು ಬಂಧಿಸಲಾಗಿತ್ತು. ಸರಕಾರದಿಂದ ನವೀಕೃತ ಆದೇಶ ಸ್ವೀಕರಿಸದೇ ಇದ್ದುದರಿಂದ ಎಪ್ರಿಲ್ ಮೊದಲ ವಾರದ ವರೆಗೆ ಸಿಬಿಐಗೆ ಔಪಚಾರಿಕ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ.
ಪೊಲ್ಲಾಚಿ ಪ್ರಕರಣದ ಸಂತ್ರಸ್ತೆ ಕಾಲೇಜು ವಿದ್ಯಾರ್ಥಿನಿಯ ಹೇಳಿಕೆ ಆಧರಿಸಿ ಒಂದನೇ ಎಫ್‌ಐಆರ್ ದಾಖಲಿಸಲಾಗಿದೆ. ನಾಲ್ವರು ಯುವಕರ ತಂಡ ಕಾರಿನಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಹಾಗೂ ಚಿನ್ನದ ಚೈನ್ ಅನ್ನು ಅಪಹರಿಸಿದ್ದರು ಎಂದು ವಿದ್ಯಾರ್ಥಿನಿ ಫೆಬ್ರವರಿ 24ರಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಳು. ಪೊಲ್ಲಾಚಿಯ ಮನೆಯ ಸಮೀಪ ದಾಳಿ ನಡೆಸಿರುವುದಕ್ಕೆ ಸಂಬಂಧಿಸಿ ಸಂತ್ರಸ್ತೆಯ ಸಹೋದರನಿಗೆ ಫೆಬ್ರವರಿ 26ರಂದು ಬೆದರಿಕೆ ಒಡ್ಡಿರುವುದಕ್ಕೆ ಸಂಬಂಧಿಸಿದ ಎಫ್‌ಐಆರ್ ಎರಡನೇಯದ್ದು. ಸಂತ್ರಸ್ತೆ ಯುವತಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದೆ ಕಾರಣಕ್ಕೆ ಆಕೆಯ ಸಹೋದರನಿಗೆ ಯುವಕರ ಗುಂಪು ಬೆದರಿಕೆ ಒಡ್ಡಿತ್ತು.