ಪಾಂಡವಪುರದಲ್ಲಿ ಬಿರುಗಾಳಿ ಮಳೆ: ಬೆಳೆ, ಮನೆಗಳಿಗೆ ಹಾನಿ- ಧರೆಗುರಳಿದ ವಿದ್ಯುತ್ ಕಂಬಗಳು

ಪಾಂಡವಪುರ, ಎ.28: ತಾಲೂಕಿನ ವಿವಿಧೆಡೆ ಭಾರಿ ಬಿರುಗಾಳಿ ಹಾಗೂ ಮಳೆ ಬಿದ್ದ ಪರಿಣಾಮ 50ಕ್ಕೂ ಹೆಚ್ಚು ಮನೆಗಳ ಕಲ್ನಾರ್ ಶೀಟ್‍ಗಳು ಹಾನಿಗೊಳಗಾಗಿ, ತಾಲೂಕಿನ ಅತ್ತಿಗಾನಹಳ್ಳಿ ಗ್ರಾಮದಲ್ಲಿ ರೈತ ಬಸವರಾಜು ಅವರ 2 ಲಕ್ಷ ರೂ.ಗಳ ಬೆಲೆಬಾಳುವ ಪಪ್ಪಾಯಿ ಬೆಳೆ ನಷ್ಟವಾಗಿದೆ.
ಶನಿವಾರ ತಡರಾತ್ರಿ ಭಾರಿ ಬಿರುಗಾಳಿ ಹಾಗೂ ಮಳೆ ಬಿದ್ದ ಹಿನ್ನೆಲೆಯಲ್ಲಿ ತಾಲೂಕಿನ ರಾಗಿಮುದ್ದನಹಳ್ಳಿ ಹೊಸ ಬಡಾವಣೆ, ಬೇಬಿ ಗ್ರಾಮ, ಹಳೇಬೀಡು, ಮಹದೇಶ್ವರಪುರ ಗ್ರಾಮ ಸೇರಿದಂತೆ ವಿವಿಧೆಡೆ ಮನೆಯ ಹೆಂಚು, ಶೀಟ್‍ಗಳು, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು, ವಿದ್ಯುತ್ ಕಂಬಗಳು ಧರೆಗುರುಳಿ ಹಾನಿಗೊಳಗಾಗಿ ರೈತರ ಬೆಳೆ ನಷ್ಟಕ್ಕೊಳಗಾಗಿದೆ.
ಅತ್ತಿನಗಾನಹಳ್ಳಿ ಗ್ರಾಮದಲ್ಲಿ ರೈತ ಬಸವರಾಜು ಅವರು ಒಂದೂವರೆ ಎಕರೆಯಲ್ಲಿ 5 ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದ 1500, ಮಹದೇಶ್ವರಪುರದ ದೊಡ್ಡೇಗೌಡರ 400, ಹಳೇಬೀಡು ತಿಮ್ಮೇಗೌಡ ಅವರ 300 ಹಾಗೂ ಕುಮಾರ್ ಅವರು 500 ಪಪ್ಪಾಯಿ ಗಿಡಗಳು ಹಾನಿಗೊಳಗಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ರಾಗಿಮುದ್ದನಹಳ್ಳಿ ಹೊಸ ಬಡಾವಣೆಯಲ್ಲಿ ಅನೇಕ ಮನೆಗಳ ಶೀಟುಗಳು ಹಾನಿಗೊಳಗಾಗಿವೆ. ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದ ಮುಂಭಾಗ 3 ವಿದ್ಯುತ್ ಕಂಬ ಸೇರಿದಂತೆ ತಾಲೂಕಿನ ಬೇಬಿ, ಚಿಕ್ಕಾಡೆ, ರಾಗಿಮುದ್ದನಹಳ್ಳಿ, ಶಂಭೂನಹಳ್ಳಿ, ಕೆರೆತೊಣ್ಣೂರು, ಬೆಳ್ಳಾಳೆ, ಲಕ್ಷ್ಮೀಸಾಗರ, ನೀಲನಹಳ್ಳಿ ಚಂದ್ರೆ, ಟಿ.ಎಸ್.ಛತ್ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 60 ವಿದ್ಯುತ್ ಕಂಬಗಳು ಹಾಗೂ 8 ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಧರೆಗುರುಳಿವೆ.
ಜತೆಗೆ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ರೈತ ಪುಟ್ಟೇಗೌಡ ಅವರಿಗೆ ಸೇರಿದ ಬಾಳೆ ಬೆಳೆ ಹಾನಿಗೀಡಾಗಿದೆ. ಅದೃಷ್ಟವಶಾತ್ ಎಲ್ಲಿಯೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಗಳಿಗೆ ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.









