ನಿಖಿಲ್ ಜೊತೆ ಯಾವುದೇ ಜಗಳವಾಗಿಲ್ಲ: ಶಾಸಕ ಅನ್ನದಾನಿ

ಮಂಡ್ಯ, ಎ.28: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ನಂಬಬೇಡಿ. ನಿಖಿಲ್ ಹಾಗೂ ನನ್ನ ನಡುವೆ ಜಗಳವಾಗಿದೆ ಅನ್ನೋದು ಸುಳ್ಳು. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಮಳವಳ್ಳಿ ಶಾಸಕ ಡಾ. ಅನ್ನದಾನಿ ತಮ್ಮ ಫೇಸ್‍ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಅಧಿಕೃತ ಫೇಸ್‍ಬುಕ್ ಅಕೌಂಟ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ, ಶೇರ್ ಮಾಡುವ ಮೂಲಕ ವಿರೋಧಿಗಳಿಗೆ ತಲುಪಿಸಿ ಎಂದು ಮನವಿ ಮಾಡಿರುವ ಅವರು, ನಾನು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿರುವೆ. ನಿಖಿಲ್ ಅವರಿಗಿಂತಲೂ ನಾನು ವಯಸ್ಸಿನಲ್ಲಿ ದೊಡ್ಡವನು. ದೇವೇಗೌಡರ ಕುಟುಂಬದಲ್ಲಿ ನನ್ನನ್ನು ಒಬ್ಬ ಸದಸ್ಯ ಎಂದು ಭಾವಿಸಿದ್ದಾರೆ. ದೇವರಾಜು ಅರಸು ನಿಗಮ ಮಂಡಳಿಯಲ್ಲಿ ಕ್ಯಾಬಿನೆಟ್ ದರ್ಜೆಯ ಅಧ್ಯಕ್ಷನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕುಮಾರಸ್ವಾಮಿ ಅವರಾಗಲಿ ಅಥವಾ ನಿಖಿಲ್ ಕುಮಾರಸ್ವಾಮಿಯವರ ಜೊತೆಯಾಗಲಿ ಈ ತರಹದ ಒಂದು ಸಂದರ್ಭ ಸಮೀಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ರೀತಿಯಾದ ಸುಳ್ಳು ಸಂದೇಶವನ್ನು ಫೇಸ್‍ಬುಕ್ ಹಾಗೂ ವಾಟ್ಸಪ್‍ಗಳಲ್ಲಿ ಯಾರು ಹರಿಬಿಟ್ಟಿದ್ದಾರೋ ಈ ಕೂಡಲೇ ನಿಲ್ಲಿಸಬೇಕು. ನಿಖಿಲ್ ಕುಮಾರಸ್ವಾಮಿ ಅವರು ಬಹಳ ಆತ್ಮೀಯರು. ಕುಮಾರಣ್ಣ ಅವರು ಕಿರಿಯ ಸೋದರನಂತೆ ನೋಡಿಕೊಂಡಿದ್ದಾರೆ. ಈ ರೀತಿಯಾದ ತಪ್ಪು ಸಂದೇಶಗಳನ್ನು ನೀಡುತ್ತಿರುವವರ ವಿರುದ್ಧ ಸೈಬರ್ ಕ್ರೈಂನಲ್ಲಿ ದೂರು ದಾಖಲು ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.





