ಮತ ಏಣಿಕೆ ವೇಳೆ ಸುಸ್ತಾಗಿ 270ಕ್ಕೂ ಅಧಿಕ ಚುನಾವಣಾ ಸಿಬ್ಬಂದಿ ಮೃತ್ಯು...!

ಜಕಾರ್ತ,ಎ.29: ಇಂಡೊನೇಶ್ಯದಲ್ಲಿ ಎಪ್ರಿಲ್ 27ರಂದು ಸಾರ್ವತ್ರಿಕ ಚುನಾವಣೆ ನಡೆದ ಹತ್ತು ದಿನಗಳ ಬಳಿಕ ನಡೆದ ಮತಏಣಿಕೆಯ ಕಾರ್ಯದ ವೇಳೆ ಬವಳಿಕೆಯಿಂದಾಗಿ ಉಂಟಾದ ಅನಾರೋಗ್ಯಗಳಿಂದಾಗಿ 270ಕ್ಕೂ ಅಧಿಕ ಮಂದಿ ಚುನಾವಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಎಪ್ರಿಲ್ 17ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಜೊತೆಗೆ ರಾಷ್ಟ್ರೀಯ ಹಾಗೂ ಪ್ರಾಂತೀಯ ಸಂಸತ್ತುಗಳ ಚುನಾವಣೆಗಳಿಗೂ ಮತದಾನ ನಡೆದಿತ್ತು. 26 ಕೋಟಿಗೂ ಅಧಿಕ ಮಂದಿ ಮತಚಲಾಯಿಸಿದ್ದರು. ಚುನಾವಣಾ ವೆಚ್ಚಗಳನ್ನು ತಗ್ಗಿಸುವ ಉದ್ದೇಶದಿಂದ ಈ ಮೂರು ಚುನಾವಣೆಗಳನ್ನು ಜೊತೆಯಾಗಿ ನಡೆಸಲಾಗಿತ್ತು. ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.80ಕ್ಕೂ ಅಧಿಕ ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಚುನಾವಣೆಯ ಬಳಿಕ ನಡೆದ ಮತಪತ್ರಗಳ ಏಣಿಕೆ ಕಾರ್ಯದಲ್ಲಿ, ಶನಿವಾರದವರೆಗೆ 272 ಮಂದಿ ಚುನಾವಣಾ ಸಿಬ್ಬಂದಿ, ಬಳಲಿಕೆಯಿಂದ ಉಂಟಾದ ಅನಾರೋಗ್ಯಗಳಿಂದಾಗಿ ಸಾವನ್ನಪ್ಪಿದ್ದಾರೆ ಹಾಗೂ 1878 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಸಾರ್ವತ್ರಿಕ ಚುನಾವಣೆಗಳ ಆಯೋಗದ ವಕ್ತಾರ ಅರೀಫ್ ಪ್ರಿಯೊ ಸುಸಾಂತೊ ತಿಳಿಸಿದ್ದಾರೆ.





