ಜಪಾನ್‌ಗೆ ಅವಳಿ ಪ್ರಶಸ್ತಿ ಸಂಭ್ರಮ
ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್

►ಯಮಗುಚಿ ಐತಿಹಾಸಿಕ ಸಾಧನೆ
►ಮೊಮೊಟಾಗೆ ಪುರುಷರ ಸಿಂಗಲ್ಸ್ ಕಿರೀಟ
ಶಾಂಘೈ, ಎ.28: ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಅಕಾನೆ ಯಮಗುಚಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ಜಪಾನ್‌ನ ಮೊದಲ ಆಟಗಾರ್ತಿ ಎನಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವದ ನಂ.1 ಆಟಗಾರ ಕೆಂಟೊ ಮೊಮೊಟಾ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು. ಈ ಮೂಲಕ ಜಪಾನ್ ದೇಶ ಟೂರ್ನಿಯಲ್ಲಿ ಅವಳಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದೆ.
ಇಲ್ಲಿ ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಯಮಗುಚಿ 5ನೇ ಶ್ರೇಯಾಂಕದ ಚೀನಾದ ಹಿ ಬಿಂಗ್‌ಜಿಯಾವೊರನ್ನು 21-19, 21-19 ಗೇಮ್‌ಗಳಿಂದ ಮಣಿಸಿ ಜಯದ ನಗೆ ಬೀರಿದರು.
21ರ ಹರೆಯದ ಯಮಗುಚಿ ತನಗಿಂತ ಹಿರಿಯ ಆಟಗಾರ್ತಿ ಬಿಂಗ್‌ಜಿಯಾವೊ ವಿರುದ್ಧ ಎರಡೂ ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆದು ಗಮನ ಸೆಳೆದರು. 42 ನಿಮಿಷಗಳ ಕಾಲ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ ಯಮಗುಚಿ ಒಂದು ಹಂತದಲ್ಲಿ 12-2 ಮುನ್ನಡೆ ಸಾಧಿಸಿದ್ದರೆ, ಎರಡನೇ ಗೇಮ್‌ನಲ್ಲಿ 11-1 ಮುನ್ನಡೆ ಸಾಧಿಸಿದ್ದರು.
ಇದೇ ವೇಳೆ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಮೊಮೊಟಾ ಚೀನಾದ ಶಿ ಯೂಖಿ ಅವರನ್ನು 12-21, 21-18 ಹಾಗೂ 21-8 ಗೇಮ್‌ಗಳ ಅಂತರದಿಂದ ಮಣಿಸಿದರು. ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮೊಮೊಟಾರನ್ನು ಮುಖಾಮುಖಿಯಾಗಿದ್ದ ಯೂಖಿ ಮೊದಲ ಗೇಮ್‌ನ್ನು 21-12ರಿಂದ ವಶಪಡಿಸಿಕೊಂಡು ಮೇಲುಗೈ ಸಾಧಿಸಿದರು. ಜಪಾನ್‌ನ ಅಗ್ರ ಶ್ರೇಯಾಂಕದ ಮೊಮೊಟಾ ಎರಡನೇ ಗೇಮ್‌ನ್ನು 21-18ರಿಂದ ವಶಪಡಿಸಿಕೊಂಡು ತಿರುಗೇಟು ನೀಡಿದರು.
ಮೂರನೇ ಗೇಮ್‌ನ್ನು 21-8 ಅಂತರದಿಂದ ಸುಲಭವಾಗಿ ಗೆದ್ದುಕೊಂಡ ಮೊಮೊಟಾ ಪ್ರಶಸ್ತಿ ಎತ್ತಿ ಹಿಡಿಯಲು ಯಶಸ್ವಿಯಾದರು.







