ಗುರುದಾಸ್ಪುರದಿಂದ ನಾಮಪತ್ರ ಸಲ್ಲಿಸಿದ ಸನ್ನಿ ಡಿಯೋಲ್
ಅಮೃತಸರ, ಎ.29: ಗುರುದಾಸ್ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಿಂದಿ ಸಿನೆಮಾ ನಟ ಸನ್ನಿ ಡಿಯೋಲ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬೆಳಿಗ್ಗೆ ಅಮೃತಸರದ ಸ್ವರ್ಣ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸನ್ನಿ ಡಿಯೋಲ್ ಅಲ್ಲಿಂದ 75 ಕಿ.ಮೀ ದೂರವಿರುವ ಗುರುದಾಸ್ಪುರಕ್ಕೆ ತೆರಳಿದರು.
ಈ ಸಂದರ್ಭ ಪಂಜಾಬ್ ಬಿಜೆಪಿ ಅಧ್ಯಕ್ಷ ಶ್ವೇತ್ ಮಲಿಕ್, ಹರ್ಯಾಣ ವಿತ್ತ ಸಚಿವ ಮತ್ತು ಪಂಜಾಬ್ ಬಿಜೆಪಿ ಚುನಾವಣಾ ಉಸ್ತುವಾರಿ ಕ್ಯಾ. ಅಭಿಮನ್ಯು, ಅಕಾಲಿದಳ ಮುಖಂಡ ಗುರ್ಬಚನ್ ಸಿಂಗ್, ಸನ್ನಿ ಡಿಯೋಲ್ ಸಹೋದರ ಬಾಬ್ಬಿ ಡಿಯೋಲ್ ಜತೆಗಿದ್ದರು.
ಈ ಮಧ್ಯೆ, ಮಗ ಸನ್ನಿ ಡಿಯೋಲ್ಗೆ ಮತ ಹಾಕುವಂತೆ ಹಿರಿಯ ನಟ ಧರ್ಮೇಂದ್ರ ಟ್ವಿಟರ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ. “ನಾವು ನಿಮ್ಮೆಲ್ಲರ ಸಹಕಾರ ಬಯಸುತ್ತಿದ್ದೇವೆ. ಈ ಗೆಲುವು ಪಂಜಾಬ್ನ ಸಹೋದರ ಸಹೋದರಿಯರ ಗೆಲುವಾಗಲಿದೆ” ಎಂದು ಧರ್ಮೇಂದ್ರ ಟ್ವೀಟ್ ಮಾಡಿದ್ದಾರೆ. ಗುರುದಾಸ್ಪುರದಲ್ಲಿ ಸನ್ನಿ ಡಿಯೋಲ್ ಹಾಲಿ ಸಂಸದ, ಕಾಂಗ್ರೆಸ್ ಮುಖಂಡ ಸುನಿಲ್ ಜಾಖಡ್, ಆಪ್ ಮುಖಂಡ ಪೀಟರ್ ಮಾಸಿಹ್ ಹಾಗೂ ಪಿಡಿಎ ಪಕ್ಷದ ಲಾಲ್ ಚಂದ್ ಅವರ ಕಠಿಣ ಸವಾಲು ಎದುರಿಸುತ್ತಿದ್ದಾರೆ.
ಗುರುದಾಸ್ಪುರದಿಂದ ಹಿಂದಿ ಸಿನೆಮ ನಟ ವಿನೋದ್ ಖನ್ನಾ ಬಿಜೆಪಿ ಅಭ್ಯರ್ಥಿಯಾಗಿ 1998, 99, 2004 ಹಾಗೂ 2014ರಲ್ಲಿ ಜಯ ಸಾಧಿಸಿದ್ದರು. 2017ರಲ್ಲಿ ಖನ್ನಾ ನಿಧನಾನಂತರ ನಡೆದ ಉಪಚುನಾವಣೆಯಲ್ಲಿ ಮುಂಬೈ ಮೂಲದ ಉದ್ಯಮಿ ಸ್ವರ್ಣಸಿಂಗ್ ಸಲಾರಿಯಾರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಆದರೆ ಸಲಾರಿಯಾ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಖಡ್ ಎದುರು 1.93 ಲಕ್ಷಕ್ಕೂ ಅಧಿಕ ಮತಗಳ ಅಂತರಿಂದ ಸೋಲುಂಡಿದ್ದರು.