ಶ್ರೀಲಂಕ ಸ್ಫೋಟಕ್ಕೂ ಕಾಸರಗೋಡಿಗೂ ನಂಟಿಲ್ಲ: ಎನ್‌ಐಎ ಸ್ಪಷ್ಟನೆ

ಕಾಸರಗೋಡು, ಎ. 29: ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕಾಸರಗೋಡಿನ ಇಬ್ಬರು ಶಂಕಿತ ವ್ಯಕ್ತಿಗಳಿಗೆ ಯಾವುದೇ ನಂಟು ಇಲ್ಲ ಎಂದು ರಾಷ್ಟ್ರೀಯ ತನಿಖಾ ದಳ ಸ್ಪಷ್ಟಪಡಿಸಿದೆ.
ಶಂಕಿತ ಇಬ್ಬರಿಂದ ಎನ್‌ಐಎ ತನಿಖಾ ದಳ ಸೋಮವಾರ ಮಾಹಿತಿ ಕಲೆ ಹಾಕಿದ್ದು, ಶ್ರೀಲಂಕ ಸ್ಫೋಟದಲ್ಲಿ ಅವರು ಯಾವುದೇ ರೀತಿಯ ಪಾತ್ರ ಹೊಂದಿಲ್ಲ ಎಂದು ತಿಳಿಸಿದೆ.
ಶಂಕಿತ ಇಬ್ಬರು ಶ್ರೀಲಂಕಾ ಸ್ಫೋಟದ ಆರೋಪಿ ಸಹರಾನ್ ಹಾಶೀಮ್‌ನ ತತ್ವ ಹಾಗೂ ಆದರ್ಶಗಳಿಂದ ಆಕರ್ಷಿತಗೊಂಡಿದ್ದರು ಎನ್ನಲಾಗಿದೆ.
ಶ್ರೀಲಂಕಾ ಸ್ಫೋಟದ ಆರೋಪಿ ಸಹರಾನ್ ಹಾಶಿಂ ಜತೆ ಕಾಸರಗೋಡಿನ ಇಬ್ಬರು ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಎನ್‌ಐಎ ಶಂಕೆ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಶಂಕಿತ ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ರವಿವಾರ ಗುಪ್ತವಾಗಿ ಕೊಚ್ಚಿಯಿಂದ ಆಗಮಿಸಿದ ತನಿಖಾ ತಂಡ ನಗರ ಹೊರವಲಯದ ವಿದ್ಯಾ ನಗರ ಮತ್ತು ಕೂಡ್ಲು ಸಮೀಪದ ಮನೆಗೆ ದಾಳಿ ನಡೆಸಿ ಮೊಬೈಲ್ ಫೋನ್ ಮತ್ತು ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದೆ. ಅಲ್ಲದೆ ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಸೋಮವಾರ ಕೊಚ್ಚಿಯ ಎನ್‌ಐಎ ಕಚೇರಿಗೆ ಹಾಜರಾಗುಂತೆ ಸೂಚಿಸಿತ್ತು. ಪಾಲಕ್ಕಾಡ್‌ನಲ್ಲೂ ಓರ್ವನನ್ನು ವಶಕ್ಕೆ ತೆಗೆದುಕೊಂಡಿತ್ತು.
ಶ್ರೀಲಂಕಾದಲ್ಲಿ ಸ್ಫೋಟ ನಡೆಸಿದ ಉಗ್ರಗಾಮಿಗಳು 2017ರಲ್ಲಿ ಕೇರಳ ಹಾಗೂ ತಮಿಳುನಾಡಿಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಆಧರಿಸಿ ಈ ಕಾರ್ಯಾಚರೆ ನಡೆಸಲಾಗಿದೆ ಎಂದು ಹೇಳಲಾಗಿದೆ.





