ಹೊಸ ಆಟೋರಿಕ್ಷಾ ಪರ್ಮಿಟ್ ವಿತರಣೆಗೆ ಹೈಕೋರ್ಟ್ ಬ್ರೇಕ್

ಬೆಂಗಳೂರು, ಎ.29: ಬೆಂಗಳೂರು ಮಹಾನಗರದಲ್ಲಿ ಹೊಸದಾಗಿ ಆಟೋರಿಕ್ಷಾ ಪರ್ಮಿಟ್ ವಿತರಣೆಗೆ ಹೈಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿದೆ. ಸಾರಿಗೆ ಇಲಾಖೆ ಆಟೋ ಪರ್ಮಿಟ್‌ಗಳನ್ನು 1.25 ಲಕ್ಷದಿಂದ 1.55 ಲಕ್ಷಕ್ಕೆ ಹೆಚ್ಚಳ ಮಾಡುವ ಕುರಿತು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯಲ್ಲಿ ಈ ಮಧ್ಯಂತರ ಆದೇಶ ಮಾಡಲಾಗಿದೆ.
ನಗರದ ನಿವಾಸಿ ನಿತಿನ್ ಆರ್.ಪುತ್ತಿಗೆ ಸಲ್ಲಿಸಿದ್ದ ಪಿಐಎಲ್ ಆಲಿಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮತ್ತು ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಯಾವುದೇ ಹೊಸ ಪರ್ಮಿಟ್ ವಿತರಿಸಿದರೆ ಅವು ಅರ್ಜಿಯ ಅಂತಿಮ ಫಲಿತಾಂಶಕ್ಕೆ ಒಳಪಡುತ್ತದೆ ಎಂದು ಆದೇಶ ನೀಡಿದೆ. ಅಲ್ಲದೆ, ಸಾರಿಗೆ ಇಲಾಖೆ ಮತ್ತಿತರ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್ ನೀಡಿ ಬೇಸಿಗೆ ರಜೆ ನಂತರ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪುತ್ತಿಗೆ ರಮೇಶ್ ಅವರು, ಬೆಂಗಳೂರು ನಗರದಲ್ಲಿ ಸಾಕಷ್ಟು ಆಟೋ ರಿಕ್ಷಾಗಳು ಅಧಿಕೃತ ಪರ್ಮಿಟ್ ಇಲ್ಲದೆ ಒಡುತ್ತಿವೆ. ಈಗಾಗಲೇ ನಗರ ವಾಹನದಟ್ಟಣೆಯಿಂದ ತತ್ತರಿಸುತ್ತಿದೆ. ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಮಿತಿ ಮೀರಿದೆ. ಆದರೂ ಸಹ ಹೊಸದಾಗಿ 30 ಸಾವಿರ ಆಟೋಗಳಿಗೆ ಪರ್ಮಿಟ್ ನೀಡಲಾಗುತ್ತಿದೆ. ಇದರಿಂದ, ನಗರದಲ್ಲಿ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.







