ಬಿರುಗಾಳಿ ಸಹಿತ ಮಳೆ: ಸೊರಬ ತಾಲೂಕಿನ ಹಲವೆಡೆ ಭಾರೀ ಹಾನಿ
ಶಿವಮೊಗ್ಗ, ಎ. 29: ಜಿಲ್ಲೆಯ ಸೊರಬ ತಾಲೂಕಿನ ಜಡೆ ಹೋಬಳಿಯ ಶಕುನವಳ್ಳಿ, ಶಂಕರಿಕೊಪ್ಪ ಗ್ರಾಮಗಳಲ್ಲಿ ರವಿವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸಿಗೆ ನಷ್ಟ ಉಂಟಾಗಿರುವ ಘಟನೆ ವರದಿಯಾಗಿದೆ.
ಬಿರುಗಾಳಿ ಮಳೆಗೆ ಹತ್ತಾರು ಮನೆಗಳು ಜಖಂ ಆಗಿದ್ದು, ನೂರಾರು ಮರಗಳು ನೆಲಕ್ಕುರುಳಿವೆ. ಭಾರೀ ದೊಡ್ಡ ಸಂಖ್ಯೆಯ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ.
ಶಕುನವಳ್ಳಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ವ್ಯಾಪಕ ನಷ್ಟವಾಗಿದೆ. ಸಂಜೆ ಸುಮಾರು 5.30 ರಿಂದ ಒಂದು ಗಂಟೆಗೂ ಹೆಚ್ಚು ಕಾಲ ಬಿದ್ದ ಮಳೆಗೆ, 12 ಕ್ಕೂ ಅಧಿಕ ಮನೆಗಳ ಮೇಲೆ ಮರಗಳು ಬಿದ್ದು ಹಾನಿಗೊಂಡಿವೆ. ಕೆಲ ಮನೆಗಳ ಮೇಲೆ ವಿದ್ಯುತ್ ಕಂಬಗಳು ಬಿದ್ದಿವೆ. ಸುಮಾರು 50 ಮನೆಗಳ ಚಾವಣಿ ಹಾರಿಹೋಗಿವೆ.
ಶಂಕರಿಕೊಪ್ಪದಲ್ಲಿ ಸುಮಾರು 30 ಮನೆಗಳ ಚಾವಣಿ ಹಾರಿಹೋಗಿವೆ. ಮರಗಳು ಉರುಳಿ ಬಿದ್ದಿವೆ. ಎರಡೂ ಗ್ರಾಮಗಳಲ್ಲಿ 60 ಕ್ಕೂ ಹೆಚ್ಚು ಮಾವು, ಬೇವು, ನೀಲಗಿರಿ ಹಾಗೂ ತೆಂಗಿನ ಮರಗಳು ನೆಲಸಮವಾಗಿವೆ. ಅದೃಷ್ಟವಶಾತ್ ಎರಡೂ ಗ್ರಾಮದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ.
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಕೂಡ ಬಿರುಗಾಳಿ ಬೀಸಿದ್ದು, ಸುಮಾರು 10 ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರಳಿ ಬಿದ್ದಿದ್ದವು. ಇದರ ಬೆನ್ನಲ್ಲೇ ರವಿವಾರ ಕೂಡ ಬಿರುಗಾಳಿಯೊಂದಿಗೆ ಬಿದ್ದ ಧಾರಾಕಾರ ಮಳೆಯಿಂದ ಜನ, ಜಾನುವಾರುಗಳು ತತ್ತರಿಸಿವೆ.
ಅಕಾಲಿಕ ಮಳೆಯಿಂದ ತೊಂದರೆಗೊಳಗಾದ ನಾಗರಿಕರಿಗೆ ಸೂಕ್ತ ಪರಿಹಾರ ವಿತರಿಸಬೇಕು. ನಷ್ಟದ ಅಂದಾಜು ಕುರಿತಂತೆ ಸರ್ವೇ ನಡೆಸಬೇಕು. ಕಾಲಮಿತಿಯಲ್ಲಿ ಸರ್ಕಾರದ ಸೌಲಭ್ಯ ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.







