ಖೇಲ್‌ರತ್ನಕ್ಕೆ ಬಜರಂಗ್, ವಿನೇಶ್, ಹೀನಾ, ಅಂಕುರ್ ಹೆಸರು ಶಿಫಾರಸು

ಹೊಸದಿಲ್ಲಿ, ಎ.29: ಭಾರತದ ಕುಸ್ತಿ ಒಕ್ಕೂಟ (ಡಬ್ಲುಎಫ್‌ಐ)ಇತ್ತೀಚೆಗೆ ಏಶ್ಯನ್ ಚಾಂಪಿಯನ್ ಕಿರೀಟ ಧರಿಸಿರುವ ಬಜರಂಗ್ ಪೂನಿಯಾ ಹಾಗೂ ಕಳೆದ ವರ್ಷದ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ವಿನೇಶ್ ಪೋಗಟ್ ಹೆಸರನ್ನು ದೇಶದ ಉನ್ನತ ಕ್ರೀಡಾ ಗೌರವ-ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಸೋಮವಾರ ಶಿಫಾರಸು ಮಾಡಿದೆ.
ಕಳೆದ ಕೆಲವು ವರ್ಷಗಳಿಂದ ನೀಡಿರುವ ಅಮೋಘ ಪ್ರದರ್ಶನವನ್ನು ಆಧರಿಸಿ ಬಜರಂಗ್ ಹಾಗೂ ವಿನೇಶ್ ಹೆಸರುಗಳನ್ನು ಪ್ರತಿಷ್ಠಿತ ಪ್ರಶಸ್ತಿಗೆ ಡಬ್ಲುಐಎಫ್ ಕಳುಹಿಸಿಕೊಟ್ಟಿದೆ.
‘‘ಇಬ್ಬರೂ ತಮ್ಮ ಅರ್ಜಿಗಳನ್ನು ಸಲ್ಲಿಸಿದ ಬಳಿಕ ಬಜರಂಗ್ ಹಾಗೂ ವಿನೇಶ್ ಹೆಸರುಗಳನ್ನು ಡಬ್ಲುಎಫ್‌ಐ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ’’ ಎಂದು ಡಬ್ಲುಎಫ್‌ಐ ಅಧಿಕೃತವಾಗಿ ಖಚಿತಪಡಿಸಿದೆ.
ವಿಶ್ವದ ನಂ.1 ಕುಸ್ತಿಪಟು ಬಜರಂಗ್ ಚೀನಾದ ಕ್ಸಿಯಾನ್‌ನಲ್ಲಿ ಇತ್ತೀಚೆಗೆ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 65 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವುದರೊಂದಿಗೆ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.
ಕಳೆದ ವರ್ಷ 25ರ ಹರೆಯದ ಪೂನಿಯಾ ಜಕಾರ್ತ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ವಿನೇಶ್ ಇತ್ತೀಚೆಗೆ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು. ಆದರೆ, ಆ ಟೂರ್ನಿಯಲ್ಲಿ ಅವರು ಹೊಸ ತೂಕ ವಿಭಾಗ 53 ಕೆಜಿಯಲ್ಲಿ ಸ್ಪರ್ಧಿಸಿದ್ದರು. ಹಾಗಾಗಿ ಇದು ಅವರ ಉತ್ತಮ ಸಾಧನೆಯಾಗಿದೆ.
2018ರಲ್ಲಿ 24ರ ಹರೆಯದ ಕುಸ್ತಿತಾರೆ ಪೋಗಟ್ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದರು. ಡಬ್ಲುಎಫ್‌ಐ ರಾಹುಲ್ ಅವಾರೆ, ಹರ್‌ಪ್ರೀತ್ ಸಿಂಗ್, ದಿವ್ಯಾ ಕಕ್ರಾನ್ ಹಾಗೂ ಪೂಜಾ ಧಾಂಡಾ ಅವರ ಹೆಸರನ್ನು ಈಗಾಗಲೇ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಪೂಜಾ ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿದ್ದರು.
21ರ ಹರೆಯದ ದಿವ್ಯಾ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದು ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದರು.
ರಾಹುಲ್ ಅವಾರೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಹರ್‌ಪ್ರೀತ್ ಸಿಂಗ ರವಿವಾರ ಕೊನೆಗೊಂಡ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಕಳೆದ ವರ್ಷ ಬಜರಂಗ್‌ಗೆ ಖೇಲ್‌ರತ್ನ ಪ್ರಶಸ್ತಿ ನಿರಾಕರಿಸಿದಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾಯಾಲಯದ ಮೆಟ್ಟಿಲೇರುವ ಬೆದರಿಕೆ ಹಾಕಿದ್ದರು. 2018ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ವೇಯ್ಟಿ ಲಿಫ್ಟರ್ ಮೀರಾಬಾಯಿ ಚಾನು ಖೇಲ್‌ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.
ಇದೇ ವೇಳೆ ಡಬ್ಲುಎಫ್‌ಐ ವೀರೇಂದ್ರ ಕುಮಾರ್, ಸುಜೀತ್ ಮಾನ್, ನರೇಂದ್ರ ಕುಮಾರ್ ಹಾಗೂ ವಿಕ್ರಮ್ ಕುಮಾರ್‌ರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಭೀಮ್ ಸಿಂಗ್ ಹಾಗೂ ಜೈ ಪ್ರಕಾಶ್ ಹೆಸರುಗಳನ್ನು ಜೀವಮಾನ ಸಾಧನೆಗೆ ನೀಡುವ ಧ್ಯಾನ್‌ಚಂದ್ ಪ್ರಶಸ್ತಿಗೆ ಕಳುಹಿಸಲಾಗಿದೆ.







