ಸುಭಾಷ್ ರಾಠೋಡ್ ಪರ ಪ್ರಚಾರಕ್ಕೆ ಹೋಗಲ್ಲ: ಬಾಬುರಾವ್ ಚವ್ಹಾಣ್

ಸುಭಾಷ್ ರಾಠೋಡ್
ಕಲಬುರ್ಗಿ, ಎ.30: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಯಾವ ಮಾನದಂಡದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಸುಭಾಷ್ ರಾಠೋಡ್ಗೆ ಟಿಕೆಟ್ ನೀಡಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಟಿಕೆಟ್ ವಂಚಿತ ಪ್ರಬಲ ಆಕಾಂಕ್ಷಿ ಹಾಗೂ ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಭಾಷ್ ರಾಠೋಡ್ ನಿನ್ನೆ ನಾಮಪತ್ರ ಸಲ್ಲಿಕೆ ಮಾಡಲು ಹೋಗುವಾಗ ಹಾಗೂ ಆನಂತರ ನಡೆದ ಬಹಿರಂಗ ಪ್ರಚಾರ ಸಭೆಗೂ ನನ್ನನ್ನು ಆಹ್ವಾನ ನೀಡಿಲ್ಲ. ಇನ್ನು ಮುಂದೆ ಅವರು ಬಂದು ಕರೆದರೂ ಅವರ ಪರ ಪ್ರಚಾರಕ್ಕೆ ಹೋಗುವುದಿಲ್ಲ ಎಂದರು.
ನಾನೂ ಸಹ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದೆ. ಸಚಿವ ಪ್ರಿಯಾಂಕ್ ಖರ್ಗೆ ಸಹ ನನ್ನನ್ನು ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಆಗಮಿಸುವಂತೆ ಆಹ್ವಾನ ನೀಡಿಲ್ಲ ಎಂದು ಬಾಬುರಾವ್ ಚವ್ಹಾಣ್ ಬೇಸರ ವ್ಯಕ್ತಪಡಿಸಿದರು.
ಸುಭಾಷ್ ರಾಠೋಡ್ ಆಳಂದದವರು, ಚಿಂಚೋಳಿ ಕ್ಷೇತ್ರಕ್ಕೆ ಅವರಿಗೆ ಟಿಕೆಟ್ ಹೇಗೆ ನೀಡಿದರು ಎಂಬುದರ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ ನಾನು ಚಿಂಚೋಳಿ ಕ್ಷೇತ್ರದವನು ಎಂದು ಅವರು ಹೇಳಿದರು.
ಚಿಂಚೋಳಿ ಕ್ಷೇತ್ರದಲ್ಲಿ ಒಂದು ಬಾರಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದೆ. ಆದರೂ ಕಾಂಗ್ರೆಸ್ ಹೈಕಮಾಂಡ್, ನನ್ನನ್ನು ಪರಿಗಣಿಸದೆ ಸುಭಾಷ್ ರಾಠೋಡ್ಗೆ ಟಿಕೆಟ್ ನೀಡಿದೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರ್ಗಿಗೆ ಬಂದ ಬಳಿಕ ಅವರ ಜೊತೆ ಚರ್ಚಿಸಿ ನನ್ನ ಮುಂದಿನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಬಾಬುರಾವ್ ಚವ್ಹಾಣ್ ತಿಳಿಸಿದರು.







