ಶಿವಮೊಗ್ಗ: ಕ್ಯಾಂಟರ್ - ಕಾರು ನಡುವೆ ಢಿಕ್ಕಿ; ಒಂದೇ ಕುಟುಂಬದ ಐವರು ಮೃತ್ಯು

ಶಿವಮೊಗ್ಗ, ಏ. 30: ಶಿವಮೊಗ್ಗ ತಾಲೂಕಿನ ಆಯನೂರು ಹೊರವಲಯದ ಚಿಕ್ಕದಾನವಂದಿ ಗ್ರಾಮದ ಬಳಿ ಮಂಗಳವಾರ ಸಂಜೆ ಕಾರು ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಮೃತಪಟ್ಟು, ಬಾಲಕಿಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಶಿವಮೊಗ್ಗ ನಗರದ ನಿವಾಸಿಗಳಾದ ಮಂಗಳಮ್ಮ (55), ಇವರ ಪುತ್ರಿ ಉಷಾ (32), ಮಗ ಮಂಜುನಾಥ (28), ಬೀರೂರು ಮೆಸ್ಕಾಂ ಕಚೇರಿಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆಳಿಯ ನೀಲಕಂಠ (36), ಮೊಮ್ಮಗ ನಂದೀಶ್ (9) ಮೃತಪಟ್ಟವರೆಂದು ಗುರುತಿಸಲಾಗಿದೆ. ನವಿ (4) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ 4.45 ರಿಂದ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಕ್ಯಾಂಟರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುರಂತ: ಮೃತರೆಲ್ಲರೂ ಶಿವಮೊಗ್ಗ ತಾಲೂಕಿನ ಕುಂಸಿ ಗ್ರಾಮದಲ್ಲಿರುವ ಕೆಪಿಟಿಸಿಎಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಳೆಹೊನ್ನೂರು ಚಂದ್ರಪ್ಪರವರ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಚಂದ್ರಪ್ಪರವರು ಮಂಗಳವಾರ ವಯೋನಿವೃತ್ತಿ ಹೊಂದಲಿದ್ದರು.
ಈ ಕಾರಣದಿಂದ ಕುಂಸಿಯ ಕೆಪಿಟಿಸಿಎಲ್ ಕಚೇರಿ ಆವರಣದಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರ ಕುಟುಂಬ ವರ್ಗದವರು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಮತ್ತೊಂದೆಡೆ ಕುಂಸಿ ಕೆಪಿಟಿಸಿಎಲ್ ಕಚೇರಿಯಲ್ಲಿ ಚಂದ್ರಪ್ಪರವರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ನಡೆದಿತ್ತು. ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಕಚೇರಿಯಲ್ಲಿಯೇ ಬೀಡುಬಿಟ್ಟಿದ್ದರು. ಕುಟುಂಬ ಸದಸ್ಯರ ಆಗಮನಕ್ಕಾಗಿ ಚಂದ್ರಪ್ಪರವರು ಕಾಯುತ್ತಿದ್ದರು. ಅಷ್ಟರಲ್ಲಿಯೇ ಅವರ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದ ವಿಷಯ ಬಂದಿತ್ತು.
'ಚಂದ್ರಪ್ಪರವರಿಗೆ ಅಕ್ಷರಶಃ ಬರಸಿಡಿಲು ಬಡಿದ ಅನುಭವವಾಗಿತ್ತು. ಸಮಾರಂಭ ಸ್ಥಳದಲ್ಲಿ ನೀರವ ಮೌನ ಆವರಿಸಿ, ಶೋಕದ ವಾತಾವರಣ ಸೃಷ್ಟಿಯಾಗಿತ್ತು. ಚಂದ್ರಪ್ಪ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರೆಲ್ಲ, ದುರಂತ ಸ್ಥಳಕ್ಕೆ ದೌಡಾಯಿಸಿದೆವು' ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಯೋರ್ವರು ಮಾಹಿತಿ ನೀಡಿದ್ದಾರೆ.







