ಜಾತೀಯತೆಯ ವಿಷ ಬೀಜ ಬಿತ್ತುವ ಪಟ್ಟಭದ್ರರು ಹೆಚ್ಚುತ್ತಿದ್ದಾರೆ: ತಪ್ಪೇರುದ್ರಪ್ಪ ವಿಷಾದ

ಚಿಕ್ಕಮಗಳೂರು, ಎ.30: ದೇಶದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾವಣೆಯ ಬಗ್ಗೆ ಧ್ವನಿ ಎತ್ತಿರುವ ಕಾರಣಕ್ಕೆ ದೇಶಾದ್ಯಂತ 128ನೇ ಅಂಬೇಡ್ಕರ್ ರವರ ಜನ್ಮದಿನಾಚರಣೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಎಂದು ಹಿರಿಯ ಪತ್ರಕರ್ತ ಬಿ. ತಿಪ್ಪೇರುದ್ರಪ್ಪ ಹೇಳಿದರು.
ನಗರದ ಶಂಕರಪುರ ಬಡಾವಣೆಯ ಪೌರಸೇವಾ ನೌಕರ ಕಾಲನಿಯ ರಾಮಮಂದಿರ ರಸ್ತೆಯಲ್ಲಿ ಅಂಬೇಡ್ಕರ್ ಯುವಕರ ಬಳಗ ಮತ್ತು ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಅಂಬೇಡ್ಕರ್ ರವರ 128ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದರೂ ಇಂದಿಗೂ ಸಮಾಜದಲ್ಲಿ ಅಸ್ಪಶ್ರ್ಯತೆ ಜೀವಂತವಿದ್ದು, ಜಾತೀಯತೆಯ ವಿಷಬೀಜ ಇನ್ನೂ ವ್ಯಾಪಕವಾಗಿ ಬಿತ್ತಲಾಗುತ್ತಿರುವುದು ವಿಷಾದನೀಯ ಎಂದರು.
ಪರಿಶಿಷ್ಟ ಜಾತಿ ವರ್ಗಗಳವರು ಹಿಂದೂಗಳಲ್ಲಿಯೇ ಅಲ್ಪಸಂಖ್ಯಾತರಾಗಿ ಶೋಷಣೆಗೊಳಗಾಗಿ ಊರಿನ ಹೊರಗೆ ಅಸ್ಪಶ್ರ್ಯರಾಗಿಯೇ ಉಳಿದುಕೊಂಡಿದ್ದಾರೆ ಎಂದ ಅವರು ಶೋಷಿತ ಸಮುದಾಯದವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನ ಕೇವಲ ದಲಿತರಷ್ಟೇ ಮೀಸಲಾಗದೇ ಸಮಾಜದ ಎಲ್ಲಾ ವರ್ಗ ಜನಾಂಗದ ಶೋಷಿತರಿಗೂ ಸಮಾನ ಅವಕಾಶ ಕಲ್ಪಿಸುವ ಆಶಯಗಳನ್ನು ಹೊಂದಿದೆಯಾದರೂ ಕೆಲವರ ಅಪಪ್ರಚಾರದಿಂದ ಸಂವಿಧಾನ ದಲಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪಕ್ಕೊಳಗಾಗಿದೆ ಎಂದು ಹೇಳಿದರು.
ಹಿಂದೂ ಧರ್ಮದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಅಂಧಾನುಕರಣೆಗಳಿಂದ ನೊಂದ ಡಾ.ಬಿ.ಆರ್.ಅಂಬೇಡ್ಕರ್ ತಾರತಮ್ಯವಿಲ್ಲದ, ಜಾತಿ ಬೇಧವಿಲ್ಲದ, ಸಮಸಮಾಜದ ಪರಿಕಲ್ಪನೆಯಿರುವ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು ಎಂದು ಹೇಳಿದರು.
ಗೃಹ ರಕ್ಷಕ ದಳದ ಸಮಾದೇಷ್ಠ, ವಕೀಲ ಅನೀಲ್‍ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದ್ದ ದಲಿತ ಸಂಘಟನೆಗಳು ಆಂತರೀಕ ಕಲಹದಿಂದ ತಮ್ಮ ಹೋರಾಟದ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯಬೇಕಿದೆ ಎಂದ ಅವರು ಸ್ವಾಭಿಮಾನದ ಬದುಕಿಗಾಗಿ ಡಾ.ಬಿ.ಆರ್.ಅಂಬೇಡ್ಕರ್‍ರವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಸ್ಥಳೀಯ ಮುಖಂಡ ಡಿ.ನಾಗರಾಜ್ ಮಾತನಾಡಿ, ಇತ್ತೀಚಿನ ಯುವಪೀಳಿಗೆ ಮೊಬೈಲ್‍ಗೀಳಿಗೆ ಬಿದ್ದು ದಿನದ ಹೆಚ್ಚು ಸಮಯವನ್ನು ಫೇಸ್‍ಬುಕ್, ಟ್ವೀಟರ್, ವಾಟ್ಸಾಪ್‍ಗಳಲ್ಲಿ ಕಾಲ ಕಳೆಯುತ್ತಾ ತಮ್ಮ ನಿಜವಾದ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದರು.
ಡಿ.ಎಸ್.ಎಸ್ ಕೆ.ಕುಮಾರ್ ಮಾತನಾಡಿ, ದಲಿತರು, ಹಿಂದುಳಿದ ವರ್ಗದ ಯುವ ಜನತೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಬದಲು ಕೋಮುವಾದಿ ಶಕ್ತಿಗಳ ಬಾಲಬುಡಕರಾಗಿ ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಕಾರ್ಯಕ್ರಮದಲ್ಲಿ ಕೂದುವಳ್ಳಿ ಮಂಜು ಮತ್ತು ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿ ರಂಜಿಸಿದರು.ಸ್ಥಳೀಯ ಯುವಕರಾದ ಕಿರಣ್, ದೇವೇಂದ್ರ, ವೆಂಕಟರಾಮ್, ವೆಂಕಟೇಶ್, ಕೀರ್ತಿಕುಮಾರ್, ಪ್ರವೀಣ್, ಪ್ರತಾಪ್, ಓಬಳೇಶ್, ರವಿ, ಶಿವು ಸೇರಿದಂತೆ ಹಲವರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್‍ರವರ ಪುತ್ಥಳಿಗೆ ಯುವಕಸಂಘದ ಮುಖಂಡರೊಂದಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶದವತಿರವರು ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು. ನಂತರ ನಗರದ ತಾಲೂಕು ಕಚೇರಿ ಆವರಣದಿಂದ ಅಂಬೇಡ್ಕರರ ಭಾವಚಿತ್ರದೊಂದಿಗೆ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.







