ಕುತ್ತಿಗೆ ಪಟ್ಟಿ ಹೊಂದಿರುವ ‘ಬೇಹುಗಾರ’ ತಿಮಿಂಗಿಲ ಪತ್ತೆ

ಓಸ್ಲೊ (ನಾರ್ವೆ), ಎ. 30: ಕುತ್ತಿಗೆ ಪಟ್ಟಿ ಹೊಂದಿರುವ ಬಿಳಿ ಬಣ್ಣದ ‘ಬಿಲೂಗ’ ತಿಮಿಂಗಿಲವೊಂದನ್ನು ನಾರ್ವೆಯ ಮೀನುಗಾರರು ಪತ್ತೆಹಚ್ಚಿದ್ದಾರೆ.
ಈ ಕುತ್ತಿಗೆ ಪಟ್ಟಿಯು ರಶ್ಯ ನಿರ್ಮಿತವೆಂಬುದಾಗಿ ಕಂಡುಬಂದಿದ್ದು, ತಿಮಿಂಗಿಲವು ರಶ್ಯದ ಸೇನಾ ನೆಲೆಯೊಂದರಿಂದ ತಪ್ಪಿಸಿಕೊಂಡು ಬಂದಿರಬಹುದು ಎಂಬ ಊಹಾಪೋಹಗಳು ಹಬ್ಬಿವೆ.
ತಿಮಿಂಗಿಲದ ಇರುವಿಕೆಯು ನಾರ್ವೆಯಲ್ಲಿ ಭಯ ಹುಟ್ಟಿಸಿದೆ ಹಾಗೂ ತನಿಖೆಗೆ ಆದೇಶ ನೀಡಲಾಗಿದೆ ಎಂದು ‘ಐಟಿವಿ ನ್ಯೂಸ್’ ವರದಿ ಮಾಡಿದೆ.
ಪಳಗಿಸಲ್ಪಟ್ಟಿರುವ ತಿಮಿಂಗಿಲವು ಇಂಗೋಯ ದ್ವೀಪದ ಸಮೀಪದ ಸಮುದ್ರದಲ್ಲಿ ನಾರ್ವೆಯ ಮೀನುಗಾರಿಕಾ ದೋಣಿಗಳ ಬಳಿಗೆ ಬರುತ್ತಿವೆ ಎಂದು ಬಿಬಿಸಿ ಹೇಳಿದೆ. ಇಂಗೋಯ ದ್ವೀಪವು ಮುರ್ಮನ್‌ಸ್ಕ್‌ನಿಂದ ಸುಮಾರು 415 ಕಿ.ಮೀ. ದೂರದಲ್ಲಿದೆ. ಮುರ್ಮನ್‌ಸ್ಕ್‌ನಲ್ಲಿ ರಶ್ಯವು ನೌಕಾ ನೆಲೆಯೊಂದನ್ನು ಹೊಂದಿದೆ.
ನಾರ್ವೆ ಮೀನುಗಾರಿಕಾ ಇಲಾಖೆಯ ಜೋರ್ಗನ್ ರೀ ವೀಗ್ ಮತ್ತು ಮೀನುಗಾರ ಜೋರ್ ಹೆಸ್ಟನ್ ಶುಕ್ರವಾರ ಆರ್ಕ್‌ಟಿಕ್ ನಾರ್ವೆಯ ಶೀತಲ ನೀರಿಗೆ ಜಿಗಿದು ತಿಮಿಂಗಿಲದ ಕುತ್ತಿಗೆ ಪಟ್ಟಿಯನ್ನು ಬಿಡಿಸಿದ್ದಾರೆ. ಈ ಪಟ್ಟಿಯಲ್ಲಿ ‘ಈಕ್ವಿಪ್‌ಮೆಂಟ್ ಸೇಂಟ್ ಪೀಟರ್ಸ್‌ಬರ್ಗ್’ ಎಂಬುದಾಗಿ ಬರೆದಿದೆ ಹಾಗೂ ಕ್ಯಾಮರವನ್ನು ಜೋಡಿಸಲು ಅದರಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಎಂದು ‘ಯುರೋ ನ್ಯೂಸ್’ ವರದಿ ಮಾಡಿದೆ.
ರಶ್ಯ ಸೇನೆಯು ಬೇಹುಗಾರಿಕೆಗಾಗಿ ತಿಮಿಂಗಿಲಗಳಿಗೆ ತರಬೇತಿ ನೀಡುತ್ತಿದೆ ಎಂಬುದಾಗಿ ನಂಬಲಾಗಿದೆ ಎಂದು ನಾರ್ವೆಯ ‘ಆಫ್ಟರ್‌ಪೋಸ್ಟನ್’ ಪತ್ರಿಕೆ ವರದಿ ಮಾಡಿದೆ.
►ರಶ್ಯ ನಿರಾಕರಣೆ
ಆದಾಗ್ಯೂ, ರಶ್ಯದ ಸೇನಾಧಿಕಾರಿ ಕರ್ನಲ್ ವಿಕ್ಟರ್ ಬರನೆಟ್ಸ್ ಈ ಆರೋಪಗಳನ್ನು ಸಂದರ್ಶನವೊಂದರಲ್ಲಿ ತಳ್ಳಿಹಾಕಿದ್ದಾರೆ.
‘‘ಒಂದು ವೇಳೆ ನಾವು ಈ ತಿಮಿಂಗಿಲಗಳನ್ನು ಬೇಹುಗಾರಿಕೆಗಾಗಿ ಬಳಸಿದ್ದರೆ, ‘ದಯವಿಟ್ಟು ಈ ಸಂಖ್ಯೆಗೆ ಕರೆ ಮಾಡಿ’ ಎಂಬ ಸಂದೇಶದೊಂದಿಗೆ ನಾವು ಮೊಬೈಲ್ ಸಂಖ್ಯೆಯನ್ನು ಕೊಡುತ್ತೇವೆಯೇ?’’ ಎಂಬುದಾಗಿ ಅವರು ಪ್ರಶ್ನಿಸಿದ್ದಾರೆ.
‘‘ಯುದ್ಧದಲ್ಲಿ ಭಾಗವಹಿಸುವ ಸೇನಾ ಡಾಲ್ಫಿನ್‌ಗಳನ್ನು ನಾವು ಹೊಂದಿದ್ದೇವೆ. ಅದನ್ನು ನಾವು ಮುಚ್ಚಿಡುವುದಿಲ್ಲ’’ ಎಂಬುದಾಗಿಯೂ ಅವರು ಹೇಳಿದ್ದಾರೆ.







