ಕಾನೂನು ಬಾಹಿರವಾಗಿ ಕಲ್ಲು ಪುಡಿ ಘಟಕ ಸ್ಥಾಪನೆ: ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

ಬೆಂಗಳೂರು, ಎ.30: ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮ(ರಕ್ಷಿತಾ ಅರಣ್ಯ ಪ್ರದೇಶ ವಲಯ)ದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಲ್ಲು ಪುಡಿ ಘಟಕವನ್ನು ಮುಚ್ಚಿಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಸಿದ್ದೇಶಪ್ಪ ಹಾಗೂ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗಿೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿರುವ ಗೈಡ್‌ಲೈನ್ಸ್ ಅನ್ನು ಗಾಳಿಗೆ ತೂರಿ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕಲ್ಲು ಪುಡಿ ಘಟಕಗಳನ್ನು ಸ್ಥಾಪಿಸಿದ್ದಾರೆ. ಇದರಿಂದ, ಶೆಟ್ಟಿಗ್ರಾಮದಲ್ಲಿ ವಾಸಿಸುತ್ತಿರುವ ಜನರ ಆರೋಗ್ಯ ಹಾಳಾಗುತ್ತಿದೆ. ಹಾಗೂ ಪರಿಸರಕ್ಕೂ ಧಕ್ಕೆ ಯಾಗುತ್ತಿದೆ. ಹೀಗಾಗಿ, ಕಲ್ಲು ಪುಡಿ ಘಟಕವನ್ನು ಮುಚ್ಚಲು ಹಾಗೂ ಕಲ್ಲು ಪುಡಿ ಘಟಕಕ್ಕೆ ಸರಬರಾಜು ಆಗುತ್ತಿರುವ ವಿದ್ಯುತ್ ಅನ್ನು ನಿಲ್ಲಿಸಲು ನಿರ್ದೇಶಿಸಬೇೆಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.







