ಲಂಚ ಸ್ವೀಕರಿಸಿದ ಪ್ರಕರಣ: ಗ್ರಾಮಕರಣಿಕನಿಗೆ ಜೈಲು
ಮಂಗಳೂರು, ಎ. 30: ಆರ್‌ಟಿಸಿ ವಿಚಾರವಾಗಿ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಣಂಬೂರು ಗ್ರಾಮಕರಣಿಕರಾಗಿದ್ದ ಉಮೇಶ್ ಕವಾಡಿ ಅವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.
ಬೈಕಂಪಾಡಿ ಮೀನಕಳಿಯ ನಿವಾಸಿ ಪುರುಷೋತ್ತಮ ಸಾಲ್ಯಾನ್ ಅವರಲ್ಲಿ ಆರ್‌ಟಿಸಿಗೆ ಸಂಬಂಧಿಸಿದಂತೆ 10 ಸಾವಿರ ರೂ. ಲಂಚ ಕೇಳಿದ್ದು, ಇದರಲ್ಲಿ 5 ಸಾವಿರ ರೂ ಪಡೆದು, ‘ನಾನೇ ಎಲ್ಲ ಮಾಡಿಕೊಡುತ್ತೇನೆ’ ಎಂದು ತಿಳಿಸಿದ್ದರು. ಈ ಕುರಿತಂತೆ ಲೋಕಾಯುಕ್ತ ಠಾಣೆಯಲ್ಲಿ ಪುರುಷೋತ್ತಮ ಸಾಲ್ಯಾನ್ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಸ್.ವಿಜಯ್‌ಪ್ರಸಾದ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿ ದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮತ್ತು ವಿಶೇಷ ನ್ಯಾಯಾಧೀಶ ಮುರಳೀಧರ ಪೈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ.
ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದಿಸಿದ್ದರು.





