ಪ್ರಸಾದ ವಿತರಣೆ ಮುನ್ನಾ ತಪಾಸಣೆ ಕಡ್ಡಾಯ
ಬೆಂಗಳೂರು, ಎ.30: ರಾಜ್ಯದಾದ್ಯಂತ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಾಲಯಗಳಲ್ಲಿ ಮುಂದಿನ ದಿನಗಳಲ್ಲಿ ಭಕ್ತರಿಗೆ ವಿತರಿಸುವ ಪ್ರಸಾದವನ್ನು ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿದ ಬಳಿಕ ವಿತರಣೆ ಮಾಡಬೇಕು ಎಂಬ ಮಾರ್ಗಸೂಚಿ ತರಲು ಇಲಾಖೆ ಮುಂದಾಗಿದೆ.
ಮೈಸೂರು ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇತ್ತೀಚಿಗೆ ಪ್ರತ್ಯೇಕ ಘಟನೆಗಳಲ್ಲಿ ಪ್ರಸಾದದಲ್ಲಿ ವಿಷ ಕಲಬೆರಕೆ ಮಾಡಿದ್ದ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿ ತರಲು ಮುಂದಾಗಿದ್ದು, ಅದರ ಪ್ರಕಾರ ಇಲಾಖೆ ವ್ಯಾಪ್ತಿಯ ಎಲ್ಲ ದೇವಸ್ಥಾನಗಳಲ್ಲಿ ನೀಡುವ ಪ್ರಸಾದವನ್ನು ಕಡ್ಡಾಯವಾಗಿ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿದ ಬಳಿಕವೇ ವಿತರಣೆ ಮಾಡಬೇಕಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನಗಳಲ್ಲಿ ಅಲ್ಲಿನ ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ಪ್ರಸಾದ ತಪಾಸಣೆ ಮಾಡಬೇಕು ಎಂದು ಸರಕಾರ ಮನವಿ ಮಾಡಲಿದ್ದು, ಇಲ್ಲಿ ಕಡ್ಡಾಯ ತಪಾಸಣೆ ಇರುವುದಿಲ್ಲ. ದೇವಾಲಯಗಳ ಆಡಳಿತ ಮಂಡಳಿಯಲ್ಲಿನ ಭಿನ್ನಾಭಿಪ್ರಾಯ ಹಾಗೂ ಗ್ರಾಮಗಳಲ್ಲಿ ಗುಂಪುಗಳ ನಡುವಿನ ಅಸಮಾಧಾನಗಳಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.
ಹೊಸ ಮಾರ್ಗಸೂಚಿ: ಹೊಸ ಮಾರ್ಗಸೂಚಿಯ ಪ್ರಕಾರ ಎಲ್ಲ ದೇವಾಲಯಗಳಲ್ಲಿ ಯಾರೇ ಆದರೂ ಪ್ರಸಾದ ವಿತರಿಸುವ ಮೊದಲು ತಾಲೂಕಿನ ವೈದ್ಯಾಧಿಕಾರಿಗಳು ತಪಾಸಣೆ ಮಾಡಬೇಕು. ಅದನ್ನು ಸೇವಿಸಿದ ಬಳಿಕ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಖಾತ್ರಿಪಡಿಸಿದ ನಂತರ ದೇವಾಲಯಕ್ಕೆ ಬರುವ ಭಕ್ತರಿಗೆ ವಿತರಣೆ ಮಾಡಬೇಕು ಎಂದಿದೆ.
ರಾಜ್ಯದಲ್ಲಿ ಸುಮಾರು 35 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟಿದ್ದು, ಅದನ್ನು ವಾರ್ಷಿಕ 25 ಲಕ್ಷಕ್ಕಿಂತ ಅಧಿಕ ವರಮಾನವಿರುವ ಎ ವರ್ಗ, ವಾರ್ಷಿಕ 5 ರಿಂದ 25 ಲಕ್ಷದೊಳಗೆ ಆದಾಯವಿರುವ ಬಿ ವರ್ಗ ಹಾಗೂ 5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಸಿ ವರ್ಗ ಎಂದು ಮೂರು ವರ್ಗಳನ್ನಾಗಿ ವಿಂಗಡನೆ ಮಾಡಲಾಗಿದೆ.
ಸರಕಾರದ ಈ ಹಿಂದಿನ ನಿಯಮಗಳ ಪ್ರಕಾರ ಪ್ರಸಾದದಲ್ಲಿ ಬಳಕೆ ಮಾಡುವ ವಸ್ತುಗಳು ಗುಣಮಟ್ಟದಿಂದ ಕೂಡಿರಬೇಕು. ಕಳಪೆ ವಸ್ತುಗಳ ಬಳಕೆ ಮಾಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಇದೆ. ಆದರೆ, ಇತ್ತೀಚಿಗೆ ಪ್ರಸಾದದಲ್ಲಿ ವಿಷಬೆರಕೆ ಮಾಡುತ್ತಿರುವುದು ಹೆಚ್ಚಾದ ಹಿನ್ನೆಲೆಯಲ್ಲಿ ಹೊಸ ನಿಯಮಾವಳಿ ರೂಪಿಸಿದ್ದು, ಶೀಘ್ರದಲ್ಲಿಯೇ ಜಾರಿಗೆ ಬರಲಿದೆ.







