ಹಂದಿ ಸಾಕಾಣಿಕೆಗೆ ಸೂಕ್ತ ಸ್ಥಳ ಗುರುತಿಸಿ: ಹೈಕೋರ್ಟ್ ಆದೇಶ
ಬೆಂಗಳೂರು, ಎ.30: ಹಂದಿ ಸಾಕಣೆದಾರರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸೂಕ್ತ ಸ್ಥಳ ಗುರುತಿಸಿ ಎಂದು ರಾಜ್ಯದ ಮಹಾನಗರ ಪಾಲಿಕೆ ಮತ್ತು ನಗರಸಭೆಗಳಿಗೆ ಹೈಕೋರ್ಟ್ ಆದೇಶಿಸಿದೆ.
ಈ ರೀತಿ ಗುರುತಿಸುವ ಜಾಗಗಳಲ್ಲಿ ಹಂದಿಗಳಿಗೆ ಅಗತ್ಯವಾದ ನೀರು ಮತ್ತು ಮೂಲಸೌಕರ್ಯ ಇರುವಂತೆ ನೋಡಿಕೊಳ್ಳಿ. ಹಂದಿ ಸಾಕಣೆ ಬಗ್ಗೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಅವುಗಳ ಪಾಲಕರಿಗೆ ಶಿಕ್ಷಣ ನೀಡಿ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ನಿರ್ದೇಶಿಸಿದೆ.
ಸಂವಿಧಾನದ ಆಶಯಗಳ ಅನುಸಾರ ವಂಚಿತ ವರ್ಗವನ್ನು ಮೇಲೆತ್ತಬೇಕಾದರೆ ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ದೊರೆಯಬೇಕು. ಈ ಆಶಯ ಈಡೇರಿದರೆ ರಾಜಕೀಯ ನ್ಯಾಯ ಪಡೆಯಲು ಸಾಧ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ದಾವಣಗೆರೆಯಲ್ಲಿ ಬೀಡಾಡಿ ಹಂದಿಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಇವುಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂಬ ಪಾಲಿಕೆ ಆದೇಶವನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ಕುಳುವ ಮಹಾಸಂಘ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.







