ಟೀಮ್ ಇಂಡಿಯಾಕ್ಕೆ ಸಹಾಯ ಮಾಡಲು ಚಹಾರ್, ಸೆನಿ, ಖಲೀಲ್, ಖಾನ್ ಸಿದ್ಧ
ವಿಶ್ವಕಪ್

ಹೊಸದಿಲ್ಲಿ, ಎ.30: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಫೈನಲ್(ಮೇ 12) ಮುಗಿದು 17 ದಿನಗಳಲ್ಲಿ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಮೆಂಟ್ ಆರಂಭಗೊಳ್ಳಲಿದೆ.
ಭಾರತ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದೆ. ಭಾರತದ 15 ಮಂದಿ ಆಟಗಾರರ ತಂಡ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಹೋರಾಟಕ್ಕೆ ಅಣಿಯಾಗುತ್ತಿದೆ. ವಿಶ್ವಕಪ್‌ನಲ್ಲಿ ಇವರಿಗೆ ಸಹಾಯ ಮಾಡಲು ನಾಲ್ವರು ವೇಗದ ಬೌಲರ್‌ಗಳು ತಂಡದೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಯುವ ಬೌಲರ್‌ಗಳಾದ ಖಲೀಲ್ ಅಹ್ಮದ್, ದೀಪಕ್ ಚಹಾರ್, ನವ್‌ದೀಪ್ ಸೈನಿ ಮತ್ತು ಆವೇಶ್ ಖಾನ್ ಟೀಮ್ ಇಂಡಿಯಾಕ್ಕೆ ಸಹಾಯ ಮಾಡಲಿದ್ದಾರೆ. ಸೈನಿ ಇದೀಗ ನಡೆಯುತ್ತಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸಿ ಗಮನ ಸೆಳೆದಿದ್ದಾರೆ.
ವಿಶ್ವಕಪ್‌ನಲ್ಲಿ ನೆಟ್ ಬೌಲಿಂಗ್‌ನಲ್ಲಿ ಸಹಾಯ ಮಾಡುವ ದೊಡ್ಡ ಜವಾಬ್ದಾರಿ ನೀಡಲಾಗಿದೆ. ವೇಗದ ಬೌಲಿಂಗ್ ಮೂಲಕ ತಂಡದ ಆಟಗಾರರಿಗೆ ವಿಶ್ವಕಪ್‌ಗೆ ತಯಾರಿ ನಡೆಸಲು ನೆರವಾಗುವ ವಿಶ್ವಾಸವನ್ನು ನವ್‌ದೀಪ್ ಸೈನಿ ವ್ಯಕ್ತಪಡಿಸಿದ್ದಾರೆ.
ಖಲೀಲ್, ಆವೇಶ್ ಮತ್ತು ದೀಪಕ್ ಭಾರತದ ತಂಡಕ್ಕೆ ನೆರವಾಗಲಿದ್ದಾರೆ. ನಾನು ನೆಟ್‌ನಲ್ಲಿ ನನ್ನಿಂದ ಸಾಧ್ಯವಿರುವ ನೆರವು ನೀಡಲು ಬಯಸಿರುವೆ’’ ಎಂದು ಸೈನಿ ಹೇಳಿದ್ದಾರೆ ಚಹಾರ್ ಸ್ವಿಂಗ್ ಮತ್ತು ಯಾರ್ಕರ್ ಮೂಲಕ ಐಪಿಎಲ್‌ನಲ್ಲಿ ಗಮನ ಸೆಳೆದಿದ್ದಾರೆ.
ಆಯ್ಕೆ ಸಮಿತಿಯು ನನಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಟ್ಟಿದೆ. ಸ್ವಿಂಗ್ ಬೌಲಿಂಗ್ ಶೈಲಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗಲಿದೆ ಎಂದು ಚಹಾರ್ ಹೇಳಿದ್ದಾರೆ.
‘‘ನಾನು ಆರಂಭಿಕ ದಾಂಡಿಗರಿಗೆ ತಯಾರಿಗೆ ನೆರವಾಗಲು ಬಯಸುವೆನು’’ ಎಂದು ಚಹಾರ್ ಹೇಳಿದ್ದಾರೆ.
1983ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಕಪಿಲ್ ದೇವ್ ನೇತೃತ್ವದ ಟೀಮ್ ಇಂಡಿಯಾವು ಕ್ಲೈವ್ ಲಾಯ್ಡ್ ನಾಯಕತ್ವದ ವೆಸ್ಟ್‌ಇಂಡೀಸ್‌ನ್ನು ಮಣಿಸಿ ಮೊದಲ ಬಾರಿ ವಿಶ್ವಕಪ್ ಜಯಿಸಿತ್ತು.
2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ವಿಶ್ವಕಪ್ ಗೆದ್ದುಕೊಂಡಿತ್ತು. ಭಾರತ ಈ ವರೆಗೆ ಎರಡು ಬಾರಿ ವಿಶ್ವಕಪ್ ಗೆದ್ದುಕೊಂಡಿದೆ.
2015ರಲ್ಲಿ ಸೆಮಿಫೈನಲ್‌ನಲ್ಲಿ ಸೋತು ವಿಶ್ವಕಪ್‌ನ್ನು ಗೆಲ್ಲುವ ಅಭಿಯಾನವನ್ನು ಕೊನೆಗೊಳಿಸಿದ್ದ ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ ಜಯಿಸುವ ಹೋರಾಟಕ್ಕೆ ತಯಾರಿ ನಡೆಸುತ್ತಿದೆ.
ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ತಜ್ಞ ಬೌಲರ್‌ಗಳಿದ್ದಾರೆ. ‘‘ಟೀಮ್ ಇಂಡಿಯಾ ಬಲಿಷ್ಠವಾಗಿದೆ.ಪ್ರತಿಯೊಬ್ಬರು ಉತ್ತಮ ಫಾರ್ಮ್ ನಲ್ಲಿದ್ದಾರೆ. ಪಂದ್ಯವನ್ನು ಗೆಲ್ಲುವಲ್ಲಿ ಆಲ್‌ರೌಂಡರ್‌ಗಳ ಪಾತ್ರ ದೊಡ್ಡದು.ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಮತ್ತು ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ’’ ಎಂಬ ವಿಶ್ವಾಸವನ್ನು ಸೈನಿ ವ್ಯಕ್ತಪಡಿಸಿದ್ದಾರೆ.







