ಮೊದಲು ನಾನು ಯಾರೆಂದು ಯಾರಿಗೂ ಗೊತ್ತಿರಲಿಲ್ಲ

ಚೆನ್ನೈ,ಎ.30: ಇತ್ತೀಚೆಗೆ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 800 ಮೀಟರ್ ಓಟದಲ್ಲಿ ಚಿನ್ನ ಜಯಿಸಿದ ಬಳಿಕ ಗೋಮತಿ ಮಾರಿಮುತ್ತು ದಿನಬೆಳಗಾಗುವುದರೊಳಗೆ ಸ್ಟಾರ್ ಆಗಿ ಬದಲಾಗಿದ್ದಾರೆ.
ಮೊದಲು ನಾನು ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಈಗ ಬೆಂಬಲ ದೊರೆಯುತ್ತಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ತಯಾರಿ ನಡೆಸುತ್ತಿರುವುದಾಗಿ ತಮಿಳುನಾಡಿನ ಅಥ್ಲೀಟ್ ಗೋಮತಿ ಮಾರಿಮುತ್ತು ಅಭಿಪ್ರಾಯಪಟ್ಟಿದ್ದಾರೆ.
ತಿರುಚನಾಪಳ್ಳಿ ಸಮೀಪದ ಗ್ರಾಮದ ನಿವಾಸಿ ಗೋಮತಿ ಇದೀಗ ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಗೋಮತಿ ಸುದ್ದಿ ಸಂಸ್ಥೆಯೊಂದಿಗೆ ನೀಡಿರುವ ಸಂದರ್ಶನಲ್ಲಿ ತಮ್ಮ ಮುಂದಿನ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
‘‘ ನಾನು ಒಲಿಂಪಿಕ್ಸ್‌ನಲ್ಲಿ ಓಡಲು ಬಯಸಿರುವೆ. ಇದೀಗ ಈ ಉದ್ದೇಶಕ್ಕಾಗಿ ತಯಾರಿ ನಡೆಸುತ್ತಿದ್ದೇನೆ. ಜನರಿಂದ ಮತ್ತು ಸರಕಾರದಿಂದ ನನಗೆ ಹೆಚ್ಚಿನ ಬೆಂಬಲ ದೊರೆಯುತ್ತಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ತಯಾರಿ ನಡೆಸುತ್ತಿದ್ದೇನೆ’’ ಎಂದು ಹೇಳಿದ್ದಾರೆ.
ಕಳೆದ ವಾರ ಗೋಮತಿ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 2 ನಿಮಿಷ ಮತ್ತು 02.70 ಸೆಕೆಂಡ್‌ಗಳಲ್ಲಿ ಅಂತಿಮ ರೇಖೆಯನ್ನು ತಲುಪಿ ಚಿನ್ನಕ್ಕೆ ಮುತ್ತಿಟ್ಟಿದ್ದರು. ಇದು ಅವರ ಜೀವನಶ್ರೇಷ್ಠ ಸಾಧನೆಯಾಗಿತ್ತು. ಈ ವರ್ಷದ ಆರಂಭದಲ್ಲಿ ಪಟಿಯಾಲದಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ನಿರ್ಮಿಸಿದ್ದ 2:03:21 ದಾಖಲೆಯನ್ನು ಉತ್ತಮಪಡಿಸಿದ್ದರು.
ರೈತನ ಮಗಳು ಗೋಮತಿ ಈ ಹಿಂದೆ ಗಾಯದ ಸಮಸ್ಯೆ ಮತ್ತು ಯಾರ ನೆರವು ಇಲ್ಲದಿದ್ದರೂ ಕಠಿಣ ಪರಿಶ್ರಮದ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದರು. ದೋಹಾ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡು ಚಿನ್ನದ ಸಾಧನೊಂದಿಗೆ ಇದೀಗ ಗಮನ ಸೆಳೆದಿದ್ದಾರೆ.
2016ರಲ್ಲಿ ತಂದೆ ಮತ್ತು ಕೋಚ್ ಮಾರಿಮುತ್ತು ಅವರನ್ನು ಕಳೆದುಕೊಂಡೆ. ಆಗ ನಾನು ಅಥ್ಲೆಟಿಕ್ಸ್‌ನಿಂದ ದೂರ ಸರಿಯುವ ಯೋಚನೆಯಲ್ಲಿದ್ದೆ. ಆದರೆ ಸ್ನೇಹಿತೆ ಫ್ರಾನ್ಸಿಸ್ ಮೇರಿ ನನ್ನ ಸಹಾಯಕ್ಕೆ ಬಂದರು. ಕ್ರೀಡಾರಂಗದಲ್ಲಿ ಮುಂದುವರಿಯುವಂತೆ ಸಲಹೆ ನೀಡಿದರು. ಮತ್ತೆ ಗಾಯದಿಂದಾಗಿ ಎರಡು ವರ್ಷಗಳ ಕಾಲ ಅಥ್ಲೆಟಿಕ್ಸ್‌ನಿಂದ ದೂರವಾಗಿದ್ದೆ’’ ಎಂದು ಗೋಮತಿ ಕಳೆದು ಹೋಗಿರುವ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ದೋಹಾದಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ನನ್ನಲ್ಲಿ ಆತ್ಮವಿಶ್ವಾಸ ಇನ್ನಷ್ಟು ಜಾಸ್ತಿಯಾಗಿದೆ. ಮುಂಬರುವ ಜುಲೈನಲ್ಲಿ ನಡೆಯಲಿರುವ ಅಂತರ್‌ರಾಜ್ಯ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವುದು ಮೊದಲ ಗುರಿ. ಬಳಿಕದ ಯೋಜನೆ ವರ್ಲ್ಡ್ ಚಾಂಪಿಯನ್‌ಶಿಪ್ ಎಂದು ಗೋಮತಿ ಹೇಳಿದ್ದಾರೆ. ಗೋಮತಿ ಹರಿದ ಶೂ ಧರಿಸಿ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಓಡಿರುವ ವಿಚಾರದ ಬಗ್ಗೆ ಗಮನ ಸೆಳೆದಾಗ ಈ ವಿಚಾರದಲ್ಲಿ ಹಿಂದೆ ಹಲವು ಬಾರಿ ಸುದ್ದಿಯಾಗಿದ್ದೇನೆ. ಆದರೆ ಇದು ಸರಿಯಲ್ಲ. ಅದು ನನ್ನ ಅದೃಷ್ಟದ ಶೂ. ಈ ಕಾರಣದಿಂದಾಗಿ ನಾನು ಆ ಶೂಸ್ ಧರಿಸಿ ಓಡಿ ಪ್ರಶಸ್ತಿ ಜಯಿಸಿರುವುದಾಗಿ ಹೇಳಿದ್ದಾರೆ.
ಗೋಮತಿ ಸಾಧನೆಯ ಬಗ್ಗೆ ತಾಯಿ 52ರ ಹರೆಯದ ರಸಾಥಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘‘ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ತೆರಳುತ್ತಿರುವುದಾಗಿ ಮತ್ತು ಎಪ್ರಿಲ್ 25ರ ಬಳಿಕ ಕರೆ ಮಾಡುವುದಾಗಿ ತಿಳಿಸಿದ್ದಳು. ಆಕೆಯ ಸಾಧನೆಯ ಬಗ್ಗೆ ನನಗೇನು ಗೊತ್ತಿರಲಿಲ್ಲ. ನನ್ನ ಮಗಳು ಕಠಿಣ ಶ್ರಮದ ಮೂಲಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಯಿಂದ ನನಗೆ ಖುಷಿಯಾಗಿದೆ. ತುಂಬಾ ಹೆಮ್ಮೆ ಎನಿಸುತ್ತದೆ’’ ಎಂದು ಹೇಳಿದ್ದಾರೆ.
‘‘ಗೋಮತಿಯ ಸಾಧನೆಯಲ್ಲಿ ಆಕೆಯ ತಂದೆಯ ಕೊಡುಗೆ ದೊಡ್ಡದು. ಈ ಹೊತ್ತು ಅವರು ಇದ್ದಿದ್ದರೆ ಅವರಿಗೆ ತುಂಬಾ ಸಂತಸವಾಗುತ್ತಿತ್ತು. ತಂದೆಯ ಕನಸನ್ನು ಗೋಮತಿ ನನಸು ಮಾಡಿದ್ದಾಳೆ ’’ ಎಂದು ಗೋಮತಿ ತಾಯಿ ಹೇಳಿದ್ದಾರೆ.







