ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶ: ಚೇತರಿಕೆ ಕಂಡ ಮಂಡ್ಯ
ಮಂಡ್ಯ, ಎ.30: ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳೆದ ವರ್ಷ ಭಾರಿ ಹಿನ್ನೆಡೆ ಕಂಡಿದ್ದ ಮಂಡ್ಯ ಜಿಲ್ಲೆ ಈ ಸಾಲಿನಲ್ಲಿ (2018-19) ಚೇತರಿಸಿಕೊಂಡಿದೆ. ಕಳೆದ ವರ್ಷ ರಾಜ್ಯಕ್ಕೆ 28 ಸ್ಥಾನಕ್ಕೆ ಕುಸಿದಿದ್ದ ಫಲಿತಾಂಶ ಈ ವರ್ಷ 10ನೇ ಸ್ಥಾನಕ್ಕೆ ಸುಧಾರಿಸಿದೆ.
10,584 ಗಂಡು ಮಕ್ಕಳು, 10,064 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 20,648 ಮಕ್ಕಳು ಪರೀಕ್ಷೆ ಬರೆದಿದ್ದು, ಆ ಪೈಕಿ 17,801 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 8,156 ಗಂಡು ಮಕ್ಕಳು, 9.045 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದು, ಒಟ್ಟಾರೆ ಫಲಿತಾಂಶ ಶೇ.85.65.
ಜಿಲ್ಲೆಗೆ ಮದ್ದೂರು ತಾಲೂಕು ಪ್ರಥಮ ಸ್ಥಾನ (ಶೇ.89.09) ಪಡೆದರೆ, ಪಾಂಡವಪುರ ಎರಡನೇ ಸ್ಥಾನ (ಶೇ.86.58), ನಾಗಮಂಗಲ 3ನೇ ಸ್ಥಾನ(ಶೇ.83.31) ಪಡೆದಿವೆ. ಮಳವಳ್ಳಿ 4ನೇ(ಶೇ.83.24), ಕೆ.ಆರ್.ಪೇಟೆ 5ನೇ(ಶೇ.81.07), ಮಂಡ್ಯ ಉತ್ತರ 6ನೇ(ಶೇ.81.11), ದಕ್ಷಿಣ 7ನೇ(ಶೇ.77) ಹಾಗೂ ಶ್ರೀರಂಗಪಟ್ಟಣ ತಾಲೂಕು 8ನೇ(ಶೇ.71.26) ಸ್ಥಾನದಲ್ಲಿದೆ.
ಜಿಲ್ಲೆಯಲ್ಲಿ 237 ಸರಕಾರಿ ಶಾಲೆಗಳ ಪೈಕಿ ಶೇ.94.12ರಷ್ಟು ಮಕ್ಕಳು ಉತ್ತೀರ್ಣರಾಗಿದ್ದರೆ, 79 ಅನುದಾನಿತ ಖಾಸಗಿ ಶಾಲೆಗಳ ಶೇ.84.36 ವಿದ್ಯಾರ್ಥಿಗಳು ಹಾಗು 133 ಅನುದಾನ ರಹಿತ ಖಾಸಗಿ ಶಾಲೆಗಳ ಶೇ.90.9 ಮಕ್ಕಳು ತೇರ್ಗಡೆಯಾಗಿದ್ದಾರೆ.
ಅತಿ ಹೆಚ್ಚು ಅಂಕ ಪಡೆದವರು:
ಮದ್ದೂರಿನ ಶಿವಪುರದ ಪೂರ್ಣಪ್ರಜ್ಞ ಶಾಲೆಯ ಜೀವನ್‍ಗೌಡ 621 ಅಂಕ, ಕೆ.ಆರ್.ಪೇಟೆ ತಾಲೂಕಿನ ತೇಗನಹಳ್ಳಿ ಆಶೀರ್ವಾದ್ ಶಾಲೆಯ ಮೊನಿಷ ಆರ್. 618, ಶ್ರೀರಂಗಪಟ್ಟಣ ತಾಲೂಕು ತರಿಪುರದ ವಿನಾಯಕ ಶಾಲೆಯ ಶ್ರೇಯಾ ಶಿವ 617, ಮಳವಳ್ಳಿ ತಾಲೂಕು ಹಲಗೂರಿನ ಜೆ.ಜೆ.ಪಬ್ಲಿಕ್ ಸ್ಕೂಲ್‍ನ ವಿನೋದ್‍ರಾಜ್ ವಿ.ಕೆ. 617, ಮಳವಳ್ಳಿ ತಾಲೂಕು ವಿನಾಯಕನಗರದ ವಿದ್ಯಾವಿಕಾಸ್ ಹೈಸ್ಕೂಲ್‍ನ ಅನನ್ಯ ಬಿ.ಎಂ. 616 ಹಾಗೂ ಮಂಡ್ಯದ ಕಾರ್ಮೆಲ್ ಕಾನ್ವೆಂಟ್ ಗಲ್ರ್ಸ್ ಸ್ಕೂಲ್‍ನ ಖಿರ್ಝಾ ಫಾತಿಮಾ 616 ಅಂಕ ಪಡೆದಿದ್ದಾರೆ.
36 ಸರಕಾರಿ ಶಾಲೆಗಳಲ್ಲಿ, 6 ಅನುದಾನಿತ ಖಾಸಗಿ ಶಾಲೆಗಳಲ್ಲಿ ಹಾಗೂ 32 ಅನುದಾನ ರಹಿತ ಶಾಲೆಗಳಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ.







