ವಿಶ್ವಕಪ್ ಗೆ ಐಪಿಎಲ್ ಉತ್ತಮ ಅಭ್ಯಾಸ ವೇದಿಕೆ : ಸ್ಟೀವ್ ಸ್ಮಿತ್
ಬೆಂಗಳೂರು, ಎ.30: ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಟೂರ್ನಿ ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಉತ್ತಮ ಅಭ್ಯಾಸ ವೇದಿಕೆಯಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ. 20 ಓವರ್‌ಗಳ ಪಂದ್ಯವಾಗಿರುವ ಐಪಿಎಲ್ ಮತ್ತು 50 ಓವರ್‌ಗಳ ಪಂದ್ಯವಾಗಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿ ವಿಭಿನ್ನ ಕ್ರಿಕೆಟ್ ಪಂದ್ಯಗಳಾಗಿದ್ದರೂ ಇಂದಿನ ದಿನದಲ್ಲಿ ಟಿ-20 ಪಂದ್ಯದ ವಿಸ್ತರಿತ ರೂಪವಾಗಿ 50 ಓವರ್‌ಗಳ ಪಂದ್ಯವನ್ನು ಗುರುತಿಸಲಾಗುತ್ತದೆ. ಐಪಿಎಲ್ ಪಂದ್ಯದಲ್ಲಿ ಆಡಿರುವುದು ವಿಶ್ವಕಪ್ ಟೂರ್ನಿಯ ಅಭ್ಯಾಸಕ್ಕೆ ಪೂರಕವಾಗಿದೆ ಮತ್ತು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಸ್ಮಿತ್ ಹೇಳಿದ್ದಾರೆ.
ಟಿ-20 ಕ್ರಿಕೆಟ್ ಆಕ್ರಮಣಕಾರಿ ಶೈಲಿಯ ಕ್ರಿಕೆಟ್. ಆದರೆ 50 ಓವರ್‌ಗಳ ಪಂದ್ಯ ಆಕ್ರಮಣ ಮತ್ತು ತಾಳ್ಮೆ ಎರಡರ ಮಿಶ್ರಣ. ಇವೆರಡನ್ನೂ ಸರಿದೂಗಿಸಿಕೊಂಡು ಭಾರತ ಹಾಗೂ ಇತರ ವಿಶ್ವಶ್ರೇಷ್ಠ ತಂಡದೆದುರು ಉತ್ತಮ ಪ್ರದರ್ಶನ ತೋರುವ ಆತ್ಮವಿಶ್ವಾಸ ಮೂಡಲು ಐಪಿಎಲ್‌ನ ಸಾಧನೆ ನೆರವಾಗಲಿದೆ ಎಂದು ಸ್ಮಿತ್ ಹೇಳಿದ್ದಾರೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾದ ಸ್ಮಿತ್ ಬಳಿಕ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಐಪಿಎಲ್‌ನಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಪರ ಆಡಿದ ಆರಂಭದ ಕೆಲವು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಈ ಮಧ್ಯೆ ರಹಾನೆಯನ್ನು ನಾಯಕತ್ವದಿಂದ ಕೆಳಕ್ಕಿಳಿಸಿದ ರಾಜಸ್ಥಾನ ರಾಯಲ್ಸ್‌ನ ಆಡಳಿತವರ್ಗ, ಸ್ಮಿತ್‌ಗೆ ಜವಾಬ್ದಾರಿ ವಹಿಸಿತ್ತು. ಸ್ಮಿತ್ ನಾಯಕತ್ವದಡಿ ಸ್ಫೂರ್ತಿದಾಯಕ ಪ್ರದರ್ಶನ ತೋರಿದ ರಾಯಲ್ಸ್ ತಂಡ ಬಳಿಕ ಎರಡು ಪಂದ್ಯಗಳಲ್ಲಿ ಗೆದ್ದಿದೆ. ಸ್ಮಿತ್ ಕೂಡಾ ಉತ್ತಮ ಆಟ ಪ್ರದರ್ಶಿಸಿ ಫಾರ್ಮ್‌ಗೆ ಬಂದಿದ್ದಾರೆ. ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೆದುರಿನ ಪಂದ್ಯ ಸ್ಮಿತ್ ಪಾಲಿಗೆ ಈ ವರ್ಷದ ಐಪಿಎಲ್‌ನ ಅಂತಿಮ ಪಂದ್ಯವಾಗಿದೆ. ಸ್ವದೇಶಕ್ಕೆ ಮರಳಿ ಆಸ್ಟ್ರೇಲಿಯಾ ತಂಡ ಕೂಡಿಕೊಂಡ ಬಳಿಕ ಮೇ 5ರಿಂದ 9ರವರೆಗೆ ನ್ಯೂಝಿಲ್ಯಾಂಡ್ ಎದುರು ಮೂರು ಅಭ್ಯಾಸ ಪಂದ್ಯದಲ್ಲಿ ಆಡಲಿದ್ದಾರೆ. ಇಂಗ್ಲೆಂಡಿಗೆ ತೆರಳಿದ ಬಳಿಕ ಒಂದೆರಡು ಅಭ್ಯಾಸ ಪಂದ್ಯ ನಡೆಯಲಿದೆ. ಹೀಗಾಗಿ ವಿಶ್ವಕಪ್‌ಗೆ ಸಂಪೂರ್ಣ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದ್ದೇನೆ ಎಂದು ಸ್ಮಿತ್ ಹೇಳಿದ್ದಾರೆ.







