ಹನೂರು: ಭಾರೀ ಗಾಳಿ ಮಳೆಗೆ ಧರೆಗುರುಳಿದ ಮರಗಳು

ಹನೂರು: ಹನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮರಗಳು ಉರುಳಿರುವ ಘಟನೆ ಮಂಗಳವಾರ ನಡೆದಿದೆ.
ಗಾಳಿಯ ಅಬ್ಬರದಿಂದಾಗಿ ಹನೂರು ಹೊರ ವಲಯದ ಮುಖ್ಯ ರಸ್ತೆಗಳಲ್ಲಿ ಹಲವು ಮರಗಳು ನೆಲಕ್ಕೆ ಉರುಳಿದ್ದು, ಸಾರ್ವಜನಿಕರು ಸಂಚರಿಸಲು ಹರಸಾಹಸ ಪಟ್ಟರು, ಅಲ್ಲದೆ ಹನೂರು ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಬಾಗದ ರಸ್ತೆ ಬದಿಯಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದ ವಾಹನವೂ ಸಹ ನೆಲಕ್ಕೆ ಉರುಳಿದೆ.
ಸೇತುವೆಗಳನ್ನು ಮೇಲ್ದರ್ಜೆಗೆ ಏರಿಸಿ: ಮಳೆ ಅಬ್ಬರಕ್ಕೆ ಮಳೆ ನೀರು ಸೇತುವೆಗಳ ಮೇಲ್ಬಾಗದಲ್ಲಿ ರಭಸವಾಗಿ ಹರಿದ್ದರಿಂದ ಪಟ್ಟಣದ ಹೂರ ವಲಯದ ಬಂಡಳ್ಳಿ ರಸ್ತೆಯಲ್ಲಿರುವ ಹಳ್ಳಗಳನ್ನು ದಾಟಿ ತಮ್ಮ ಗ್ರಾಮಗಳಿಗೆ ತೆರಳಲು ಸಾರ್ವಜನಿಕರು ಹರಸಾಹಸ ಪಟ್ಟರು. ಈ ಭಾಗದಲ್ಲಿರುವ ಅನೇಕ ಹಳ್ಳಗಳ ಸೇತುವೆಗಳು ತುಂಬಾ ಕೆಳಮಟ್ಟದಲ್ಲಿರುವುದರಿಂದ ಮಳೆ ಬಂದರೆ ಗ್ರಾಮಗಳಿಗೆ ತೆರಳಲು ತೊಂದರೆ ಆಗುತ್ತದೆ ಎಂದು ಈ ಭಾಗದ ಜನಪ್ರತಿನಿಧಿಗಳಿಗೆ ಹಲವು ಬಾರಿ ಅಳಲು ತೋಡಿಕೂಂಡರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.





