ಮೈಸೂರಿನ ಜೆಡಿಎಸ್ ಕಾರ್ಯಕರ್ತಕರು ಬಿಜೆಪಿಗೆ ಮತ ಹಾಕಿದ್ದಾರೆ: ಜಿ.ಟಿ.ದೇವೇಗೌಡ

ಮೈಸೂರು, ಮೇ 1: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಭಾಗದ ಕೆಲ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಬೂರು ಪಂಚಾಯತ್ ಸೇರಿ ಕೆಲವೆಡೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿರುವುದು ತಿಳಿದು ಬಂದಿದೆ. ಮೈತ್ರಿ ವಿಚಾರದಲ್ಲಿ ಎರಡೂ ಪಕ್ಷಗಳಲ್ಲೂ ತಪ್ಪಾಗಿದೆ. ಜೆಡಿಎಸ್‌ಗೆ ಯಾವ ಕ್ಷೇತ್ರ ಕೊಡುತ್ತಾರೋ ಎಂಬ ಗೊಂದಲದಲ್ಲೇ ಹಲವು ದಿನಗಳು ಕಳೆದವು. ತಡವಾಗಿ ಮೈತ್ರಿ ಮಾಡಿಕೊಂಡ ಕಾರಣ ಎಡವಟ್ಟಾಗಿದೆ ಎಂದರು.
ಜೆಡಿಎಸ್ ನಾಯಕರಲ್ಲೇ ಮೈತ್ರಿಯ ಬಗ್ಗೆ ಹಲವು ಗೊಂದಲಗಳು ಇದ್ದುದರಿಂದ ಕೆಳ ಹಂತದ ಕಾರ್ಯಕರ್ತರಲ್ಲಿ ಈ ಬಗ್ಗೆ ಗೊಂದಲ ಉಂಟಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಲೋಕಸಭಾ ಚುನಾವಣೆಗೂ 2 ತಿಂಗಳು ಮೊದಲೇ ಎರಡೂ ಪಕ್ಷಗಳ ನಾಯಕರು ಮೈತ್ರಿ ವಿಚಾರ ಮತ್ತು ಕ್ಷೇತ್ರ ಹಂಚಿಕೆಯಲ್ಲಿ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದರೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.





