ಜಿ.ಟಿ. ದೇವೇಗೌಡ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿಲ್ಲ: ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು, ಮೇ 1: ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಮತ ಹಾಕಿದ್ದಾರೆ ಎಂಬ ಸಚಿವ ಜಿ.ಟಿ.ದೇವೇಗೌಡರ ಹೇಳಿಕೆ, ಅವರು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಿ.ಟಿ.ದೇವೇಗೌಡ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಮೈತ್ರಿ ಸರಕಾರಲ್ಲಿ ಇಂತಹ ಹೇಳಿಕೆ ಸರಿಯಲ್ಲವೆಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ತಡವೇನು ಆಗಿಲ್ಲ. ಮೈಸೂರು ಕ್ಷೇತ್ರವು ಕಾಂಗ್ರೆಸ್ಗೆ ಎಂದು ಮೊದಲೆ ನಿರ್ಧಾರ ಆಗಿತ್ತು. ಕ್ಷೇತ್ರದಲ್ಲಿ ಜವಾಬ್ದಾರಿ ತೆಗೆದುಕೊಂಡವರು ಸರಿಯಾಗಿ ಕೆಲಸ ಮಾಡಿದ್ದರೆ ಇಂತಹ ಹೇಳಿಕೆಗಳು ಬರುತ್ತಿರಲಿಲ್ಲವೆಂದು ತಿಳಿಸಿದರು.
ಶೇ.80ರಷ್ಟು ಮೈತ್ರಿ ಯಶಸ್ವಿಯಾಗಿದೆ. ಶೇ.20ರಷ್ಟು ಕಡೆ ಸಮಸ್ಯೆಯಾಗಿದೆ. ಕೋಲಾರ, ಮಂಡ್ಯ, ಮೈಸೂರು, ಚಿತ್ರದುರ್ಗದಲ್ಲಿ ಮೈತ್ರಿ ಸಮಸ್ಯೆಯಾಗಿದೆ. ಉಳಿದೆಡೆ ಮೈತ್ರಿ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರವಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.







