ಭೀಮಣ್ಣ ಖಂಡ್ರೆಗೆ ಬಸವ ಭೂಷಣ ಪ್ರಶಸ್ತಿ

ಬೆಂಗಳೂರು: ದುಬೈ ಬಸವ ಸಮಿತಿ ವತಿಯಿಂದ ಪ್ರತಿ ವರ್ಷ ನೀಡುವ ಪ್ರತಿಷ್ಠಿತ ಬಸವ ಭೂಷಣ ಪ್ರಶಸ್ತಿಯನ್ನು ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷ ಭಿಮಣ್ಣ ಖಂಡ್ರೆ ಅವರಿಗೆ ನೀಡಲಾಗಿದೆ.
ಈ ಕುರಿತು ದುಬೈ ಬಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಲಿಂಗದಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ನೀಡಿದ್ದು, ಸಮಾಜದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಳಿವಯಸ್ಸಿನಲ್ಲಿಯೂ ಸಮಾಜದ ಏಳಿಗೆಗಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಬಸವಾನುಯಾಯಿಯಾಗಿ ಶರಣರ ತತ್ವಗಳನ್ನು ಪಾಲಿಸಿಕೊಂಡು ಬರುತ್ತಿರುವ ಹಿರಿಯ ಜೀವಿಗಳಾದ ಭೀಮಣ್ಣ ಖಂಡ್ರೆ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಈ ವರ್ಷದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಮೇ 3 ರಂದು ದುಬೈನ ಜೆಎಸ್ ಎಸ್ ಇಂಟರ್ ನ್ಯಾಷನಲ್ ಪ್ರೈವೇಟ್ ಸ್ಕೂಲ್ ನಲ್ಲಿ ನಡೆಯುವ ವಿಶ್ವ ಗುರು ಬಸವಣ್ಣ ಜಯಂತಿ ಕಾರ್ಯಕ್ರಮದ ಸಮಾರಂಭದಲ್ಲಿ ಭೀಮಣ್ಣ ಖಂಡ್ರೆ ಅವರಿಗೆ ಬಸವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆನಂದಪುರ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳ ಸಿದ್ದ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ.
ಜಿ ಕನ್ನಡ ಸರಿಗಮಪ ಕಾರ್ಯಕ್ರಮ ವಿನ್ನರ್ ಚೆನ್ನಪ್ಪ ಹುದ್ದಾರ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದು ಮಾತನಾಡಿಸುವ ಗೊಂಬೆ ಖ್ಯಾತಿಯ ಸುಮಾ ರಾಜಕುಮಾರ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.







