ಉಚ್ಚಾಟಿಸಿದರೂ ಪರವಾಗಿಲ್ಲ, ಪಕ್ಷದ ನಾಯಕರು ತಪ್ಪು ಮಾಡಿದರೆ ಹೇಳುತ್ತೇನೆ : ಜಯಪ್ರಕಾಶ್ ಹೆಗ್ಡೆ
ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟರೆ ?

ಮಂಗಳೂರು, ಮೇ 1: ಪಕ್ಷದ ನಾಯಕರು ತಪ್ಪು ಮಾಡಿದರೆ ನಾನು ಅದನ್ನು ತಪ್ಪು ಎಂದು ಹೇಳುತ್ತೇನೆ. ನನ್ನನ್ನು ಇನ್ನೊಮ್ಮೆ ಉಚ್ಚಾಟಿಸಿದರೂ ಪರವಾಗಿಲ್ಲ ಎಂದು ಹೇಳಿರುವ ಮಾಜಿ ಸಚಿವ, ಹಾಲಿ ಬಿಜೆಪಿ ಮುಖಂಡ ಕೆ ಜಯಪ್ರಕಾಶ್ ಹೆಗ್ಡೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಮಾಜಿ ಸಚಿವ ಬಿ ಎ ಮೊಹಿದಿನ್ ಅವರ ಆತ್ಮಕಥನದ ಇಂಗ್ಲಿಷ್ ಅನುವಾದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ ಅವರು "ಸಾಮಾನ್ಯವಾಗಿ ಒಂದು ಪಕ್ಷದಲ್ಲಿರುವವರು ಆ ಪಕ್ಷದ ನಾಯಕನ ಮಾತನ್ನು ಒಪ್ಪಿಕೊಳ್ಳಬೇಕು ಎಂದು ಹೇಳಬೇಕಾಗುತ್ತದೆ ಎಂದು ಇಲ್ಲಿ ಹೇಳಿದರು. ಆದರೆ ನಾನು ಅದನ್ನು ಒಪ್ಪುವುದಿಲ್ಲ. ಅದು ಪ್ರಜಾಪ್ರಭುತ್ವ ಅಲ್ಲವೇ ಅಲ್ಲ. ನಾನು ನಮ್ಮ ಪಕ್ಷದ ನಾಯಕರು ತಪ್ಪು ಮಾಡಿದರೆ ಅದನ್ನೂ ತಪ್ಪು ಎಂದು ಹೇಳುತ್ತೇನೆ. ತಪ್ಪನ್ನು ತಪ್ಪು ಎನ್ನುವುದು ತಪ್ಪು ಎಂದಾದರೆ ನಾನು ಆ ತಪ್ಪನ್ನು ಮತ್ತೆ ಮತ್ತೆ ಮಾಡುತ್ತೇನೆ. ಇದರಿಂದ ಏನು ಬೇಕಾದರೂ ಆಗಲಿ. ಹೆಚ್ಚೆಂದರೆ ನನ್ನನ್ನು ಉಚ್ಚಾಟಿಸಬಹುದು. ಇದಕ್ಕೂ ಮೊದಲು ಒಮ್ಮೆ ಉಚ್ಚಾಟಿಸಿದ್ದಾರೆ (ಕಾಂಗ್ರೆಸ್ ನಿಂದ), ಇನ್ನೊಮ್ಮೆ ಉಚ್ಚಾಟನೆ ಆಗಬಹುದು ಅಷ್ಟೇ" ಎಂದು ಹೇಳಿದ್ದಾರೆ.
ಇದು ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರುವ ಸೂಚನೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದಕ್ಕಾಗಿ ಅವರು ಭಾರೀ ಲಾಬಿ ಮಾಡಿದ್ದರು. ಆದರೆ ಕೊನೆಗೂ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆದ್ದರಿಂದ ಈ ಬಾರಿ ಚುನಾವಣೆ ಪ್ರಚಾರದಲ್ಲಿ ಎಲ್ಲಿಯೂ ಅವರು ಸಕ್ರಿಯವಾಗಿರಲಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತ ಬಳಿಕ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಕೇಳಿದ್ದರು. ಆದರೆ ಕಾಂಗ್ರೆಸ್ ನಿಂದ ಮತ್ತೆ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಟಿಕೆಟ್ ಕೊಟ್ಟಿದ್ದರಿಂದ ಬಂಡಾಯವೆದ್ದ ಜಯಪ್ರಕಾಶ್ ಹೆಗ್ಡೆ ಪಕ್ಷದಿಂದ ಉಚ್ಛಾಟನೆಯಾಗಿದ್ದರು. ಬಳಿಕ ಬಿಜೆಪಿ ಸೇರಿದ್ದರು.
ಇದೀಗ ಬಿಜೆಪಿಯಲೂ ಮೂಲೆಗುಂಪಾಗಿರುವ ಹೆಗ್ಡೆ ಅವರಿಗೆ ಬಿಜೆಪಿಯ ಸಿದ್ಧಾಂತಕ್ಕೆ ಹೊಂದಿಕೊಳ್ಳುವುದೂ ಕಷ್ಟವಾಗಿದೆ. ಹಾಗಾಗಿ ಅಲ್ಲಿಂದ ಹೊರಡುವ ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿಯೇ ಹೀಗೆ ಮಾತಾಡಿದ್ದಾರೆ ಎಂದು ಹೇಳಲಾಗುತ್ತಿದೆ.







