ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್ ಭೇಟಿ

ಫೈಲ್ ಚಿತ್ರ
ಬೆಂಗಳೂರು, ಮೇ 1: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಹುಟ್ಟು ಹಬ್ಬದ ಪ್ರಯುಕ್ತ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಹೋಗಿ ಶುಭಕೋರಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಬುಧವಾರ ಸದಾಶಿವನಗರದಲ್ಲಿ ಎಸ್.ಎಂ.ಕೃಷ್ಣ ಅವರೊಂದಿಗೆ ಸಚಿವ ಡಿ.ಕೆ.ಶಿವಕುಮಾರ್ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.
ಈ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಿಗೆ ಹುಟ್ಟು ಹಬ್ಬದ ಪ್ರಯುಕ್ತ ಶುಭ ಕೋರವುದಕ್ಕೆ ಮಾತ್ರ ಬಂದಿದ್ದೇನೆ. ಇಲ್ಲಿ ಯಾವುದೆ ರಾಜಕೀಯ ಮಾತುಕತೆ ನಡೆಸಿಲ್ಲವೆಂದು ತಿಳಿಸಿದರು.
ನಾನು ಕಾಂಗ್ರೆಸ್ ನ ವಕ್ತಾರನಲ್ಲ. ಸಾಮಾನ್ಯ ಕಾರ್ಯಕರ್ತ ಹಾಗೂ ಸಚಿವನಷ್ಟೆ. ಹೀಗಾಗಿ ಎಸ್.ಎಂ.ಕೃಷ್ಣ ಅವರೊಂದಿಗೆ ಯಾವುದೆ ಮಾತುಕತೆ ನಡೆಸಿದರೂ ಬಹಿರಂಗವಾಗಿಯೆ ನಡೆಸುತ್ತೇನೆ. ಇದರಲ್ಲಿ ಮುಚ್ಚುಮೊರೆ ಏನಿಲ್ಲವೆಂದು ತಿಳಿಸಿದರು.
ನಾನು ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಮೈತ್ರಿ ಧರ್ಮವನ್ನು ಪಾಲಿಸಿದ್ದೇನೆ. ಅದೇ ರೀತಿಯಲ್ಲಿ ಸಚಿವ ಜಿ.ಟಿ.ದೇವೇಗೌಡರು ಪಾಲಿಸಿದ್ದಾರೆಂಬ ವಿಶ್ವಾಸವಿದೆ.
-ಡಿ.ಕೆ.ಶಿವಕುಮಾರ್ ಸಚಿವರು.







