ಡೆಲ್ಲಿ ಕ್ಯಾಪಿಟಲ್ಸ್ ನ ಗೆಲುವಿಗೆ 180 ರನ್ ಸವಾಲು

ಚೆನ್ನೈ, ಮೇ 1: ಐಪಿಎಲ್ ಟ್ವೆಂಟಿ-20 ಟೂರ್ನಿಯ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 179 ರನ್ ದಾಖಲಿಸಿದೆ.
ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಚೆನ್ನೈ ತಂಡ ಸುರೇಶ್ ರೈನಾರ ಆಕರ್ಷಕ ಅರ್ಧಶತಕ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಆರಂಭದಲ್ಲಿ ಚೆನ್ನೈ ಬ್ಯಾಟಿಂಗ್ ಕಳಪೆಯಾಗಿತ್ತು. 3.2 ಓವರ್ ಗಳಲ್ಲಿ 4 ರನ್ ಸೇರಿಸುವಷ್ಟರಲ್ಲಿ ಮೊದಲ ವಿಕೆಟ್ ಪತನಗೊಂಡಿತ್ತು.
ಆರಂಭಿಕ ದಾಂಡಿಗ ಶೇನ್ ವಾಟ್ಸನ್ (0) ಅವರು ಸುಚಿತ್ ಓವರ್ ನಲ್ಲಿ ಅಕ್ಷರ್ ಪಟೇಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಎರಡನೇ ವಿಕೆಟ್ ಗೆ ಎಫ್ ಡು ಪ್ಲೆಸಿಸ್ ಮತ್ತು ಸುರೇಶ್ ರೈನಾ ಜೊತೆಯಾಗಿ 83 ರನ್ ಗಳನ್ನು ಸೇರಿಸಿದರು. ಪ್ಲೆಸಿಸ್ 39 ರನ್ (41ಎ, 2ಬೌ,2ಸಿ), ಸುರೇಶ್ ರೈನಾ 59 ರನ್ (37ಎ, 8ಬೌ,1ಸಿ) ಗಳಿಸಿದರು.
4ನೇ ವಿಕೆಟ್ ಗೆ ರವೀಂದ್ರ ಜಡೇಜ ಮತ್ತು ನಾಯಕ ಧೋನಿ 43 ರನ್ ಸೇರಿಸಿದರು. ಜಡೇಜ 25 ರನ್ (10ಎ, 2ಬೌ,2ಸಿ) ಗಳಿಸಿ ಔಟಾದರು. ಧೋನಿ ಔಟಾಗದೆ 44 ರನ್ (22ಎ, 4ಬೌ, 3ಸಿ) ಮತ್ತು ಅಂಬಟಿ ರಾಯುಡು ಔಟಾಗದೆ 5 ರನ್ ಗಳಿಸಿ ತಂಡಕ್ಕೆ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು.
ಡೆಲ್ಲಿ ತಂಡದ ಜಗದೀಶ್ ಸುಚಿತ್ 28ಕ್ಕೆ 2, ಕ್ರಿಸ್ ಮಾರಿಸ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಹಂಚಿಕೊಂಡರು.







