"ಚೌಕಿದಾರ್ ಛೋರ್ ಹೆ" ಘೋಷಣೆ ಕೂಗದಂತೆ ಕೋರಿದ ಪ್ರಿಯಾಂಕಾ ಗಾಂಧಿ
ಅಮೇಥಿ, ಮೇ 2: ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಪರ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಹಾಗೂ ಮಕ್ಕಳ ಗುಂಪಿನ ನಡುವಿನ ಸಂವಾದ ಟ್ವಿಟ್ಟರ್ನಲ್ಲಿ ವೈರಲ್ ಆಗಿದ್ದು, ಇದರ ಪರ ಹಾಗೂ ವಿರೋಧವಾಗಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
"ಚೌಕಿದಾರ್ ಛೋರ್ ಹೆ" ಎಂದು ಮಕ್ಕಳು ಘೋಷಣೆ ಕೂಗಿದಾಗ ನಿಬ್ಬೆರಗಾದ ಪ್ರಿಯಾಂಕಾ ತಮ್ಮ ಕೈಗಳಿಂದ ಬಾಯಿ ಮುಚ್ಚಿಕೊಂಡರು. ಬೆರಗಿನಿಂದ ಮಕ್ಕಳತ್ತ ನೋಡಿದ ಪ್ರಿಯಾಂಕಾ, "ಯೆ ವಾಲಾ ನಹಿ, ಅಚ್ಛಾ ನಹಿ ಲಗೇಗಾ, ಅಚ್ಛೇ ಬಚ್ಚೇ ಬನೊ" (ಇದು ಬೇಡ. ಇದು ಚೆನ್ನಾಗಿಲ್ಲ. ಒಳ್ಳೆಯ ಮಕ್ಕಳಾಗಿ" ಎಂದು ಬುದ್ಧಿ ಹೇಳಿದ್ದಾರೆ. ಈ ವೇಳೆ ಮಕ್ಕಳು "ರಾಹುಲ್ಗಾಂಧಿ ಝಿಂದಾಬಾದ್" ಘೋಷಣೆ ಕೂಗಿದ್ದಾರೆ. ಈ ವೀಡಿಯೊದ ಪರ ಹಾಗೂ ವಿರೋಧವಾಗಿ ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿವೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ವೀಡಿಯೊ ಪೋಸ್ಟ್ ಮಾಡಿ, "ಒರಟುತನದ ಪರಮಾವಧಿ.." ಎಂದು ಟೀಕಿಸಿದ್ದಾರೆ. ಆದರೆ ಈ ವೀಡಿಯೊದಲ್ಲಿ, ಘೋಷಣೆ ಕೂಗಬೇಡಿ ಎಂದು ಮಕ್ಕಳಿಗೆ ಮನವಿ ಮಾಡುತ್ತಿರುವ ಭಾಗ ಇಲ್ಲ.
ಆದರೆ ಹಲವು ಮಂದಿ ಪ್ರಿಯಾಂಕಾ ನಡೆಯನ್ನು ಶ್ಲಾಘಿಸಿದ್ದಾರೆ. ಆಮ್ ಆದ್ಮಿ ನಾಯಕಿ ಅಲ್ಕಾ ಲಂಬಾ "ಆಕೆಯ ಪ್ರತಿಕ್ರಿಯೆ ಇಷ್ಟವಾಯಿತು. ಆಕೆ ಮಕ್ಕಳಿಗೆ ಮಾರ್ಗದರ್ಶನ ನೀಡಿ ಸರಿಯಾದ ಸಮಯದಲ್ಲಿ ಹಾಗೆ ಹೇಳದಂತೆ ತಡೆದರು" ಎಂದು ಮೆಚ್ಚುಗೆ ಸೂಚಿಸಿದ್ದಾರೆ.