ರಬಾಡಗೆ ಗಾಯದ ಸಮಸ್ಯೆ

ಹೊಸದಿಲ್ಲಿ, ಮೇ 2: ದಕ್ಷಿಣ ಆಫ್ರಿಕದ ಪ್ರಮುಖ ವೇಗದ ಬೌಲರ್ ಕಾಗಿಸೊ ರಬಾಡ ಐಪಿಎಲ್ ಟೂರ್ನಿ ಅಂತಿಮ ಹಂತ ತಲುಪಿದ ಸಮಯದಲ್ಲೇ ಗಾಯದ ಸಮಸ್ಯೆಗೆ ಸಿಲುಕಿರುವುದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಚಿಂತೆಯಾಗಿ ಕಾಡಲಾರಂಭಿಸಿದೆ. ಮಾತ್ರವಲ್ಲ ವಿಶ್ವಕಪ್‌ಗೆ ಕೆಲವೇ ದಿನಗಳಿರುವಾಗ ದಕ್ಷಿಣ ಆಫ್ರಿಕ ತಂಡಕ್ಕೂ ಈ ಸುದ್ದಿ ಆಘಾತ ತಂದಿದೆ.
ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದ ವೇಳೆ ಡೆಲ್ಲಿ ತಂಡ ರಬಾಡ ಸೇವೆಯಿಂದ ವಂಚಿತವಾಗಿದ್ದು ಆ ಪಂದ್ಯವನ್ನು ಡೆಲ್ಲಿ 80 ರನ್‌ಗಳಿಂದ ಸೋತಿತ್ತು. ಈ ಋತುವಿನಲ್ಲಿ ಮೊದಲ ಬಾರಿ ರಬಾಡ ಐಪಿಎಲ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ‘‘ಮುನ್ನ್ನೆಚ್ಚರಿಕೆಯ ಕ್ರಮವಾಗಿ ತಂಡದ ಆಡಳಿತ ವರ್ಗ ರಬಾಡಗೆ ವಿಶ್ರಾಂತಿ ನೀಡಲು ನಿರ್ಧರಿಸಿತು. ಅವರ ಸಾಮ್ಯರ್ಥವೇನೆಂದು ನಮಗೆ ಗೊತ್ತಿತ್ತು. ಸ್ಲಾಗ್ ಓವರ್‌ಗಳಲ್ಲಿ ಅವರು ಅಮೋಘ ಬೌಲಿಂಗ್ ಮಾಡುತ್ತಿದ್ದರು. ಖಂಡಿತವಾಗಿಯೂ ನಾವು ಅವರಿಂದ ವಂಚಿತರಾಗಿದ್ದೇವೆ. ಅವರು ಬೆನ್ನುನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ಪಡೆಯುವುದು ಉತ್ತಮ’’ ಎಂದು ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಹಿರಿಯ ವೇಗದ ಬೌಲರ್ ಡೇಲ್ ಸ್ಟೇಯ್ನ ಕೂಡ ಗಾಯಗೊಂಡಿರುವ ಕಾರಣ ರಬಾಡ ಅವರ ಗಾಯದ ಸಮಸ್ಯೆ ದ.ಆಫ್ರಿಕಕ್ಕೆ ತಲೆನೋವು ತಂದಿದೆ. ಸ್ಟೇಯ್ನೆ ಈ ವರ್ಷದ ಐಪಿಎಲ್‌ನಲ್ಲಿ ಕೇವಲ 2 ಪಂದ್ಯ ಆಡಿದ್ದರು. ವಿಶ್ವಕಪ್‌ಗೆ ದಿನಗಣನೆಗೆ ಆರಂಭವಾಗಿರುವ ಕಾರಣ ಎಲ್ಲ ರಾಷ್ಟ್ರೀಯ ತಂಡಗಳ ಫಿಸಿಯೋಗಳು ಎಲ್ಲ 8 ಫ್ರಾಂಚೈಸಿಗಳಲ್ಲಿರುವ ತಮಗೆ ಸಂಬಂಧಿತ ಆಟಗಾರರ ನಿರಂತರ ಸಂಪರ್ಕದಲ್ಲಿದ್ದು ಅವರ ಕೆಲಸದ ಒತ್ತಡದ ಮೇಲೆ ನಿಗಾವಹಿಸಿದ್ದಾರೆ.
ರಬಾಡ ಈ ಹಿಂದೆಯೂ ಬೆನ್ನುನೋವಿನ ಸಮಸ್ಯೆ ಎದುರಿಸಿದ್ದರು. ಕಳೆದ ವರ್ಷ ಮೂರು ತಿಂಗಳ ಕಾಲ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಅವರು ಐಪಿಎಲ್‌ನಿಂದ ಹೊರಗುಳಿದ್ದರು.
ಪ್ರಸ್ತುತ ಅವರು ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದಿದ್ದಾರೆ. 14.72ರ ಸರಾಸರಿಯಲ್ಲಿ 12 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಉರುಳಿಸಿದ್ದಾರೆ.







