ಚಾಂಪಿಯನ್ಸ್ ಲೀಗ್: ಬಾರ್ಸಿಲೋನಕ್ಕೆ ಜಯ
► ಮೆಸ್ಸಿ ಅವಳಿ ಗೋಲು ► ಲಿವರ್‌ಪೂಲ್ ಫೈನಲ್ ಹಾದಿ ಕಠಿಣ

ಕ್ಯಾಂಪ್‌ನೌ(ಬಾರ್ಸಿಲೋನ),ಮೇ 2: ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಬಾರ್ಸಿಲೋನ ತಂಡ ಲಿವರ್‌ಪೂಲ್ ವಿರುದ್ಧ ಯುಇಎಫ್‌ಎ ಚಾಂಪಿಯನ್ಸ್ ಲೀಗ್‌ನ ಮೊದಲ ಹಂತದ ಸೆಮಿ ಫೈನಲ್‌ನಲ್ಲಿ 3-0 ಅಂತರದಿಂದ ಜಯ ಸಾಧಿಸಿದೆ.
ಮಂಗಳವಾರ ಎರಡನೇ ಹಂತದ ಸೆಮಿ ಫೈನಲ್ ಆಡಲಿರುವ ಬಾರ್ಸಿಲೋನ ಮುಂದಿನ ತಿಂಗಳು ನಡೆಯಲಿರುವ ಫೈನಲ್‌ಗೆ ತಲುಪಲು ಇನ್ನು ಒಂದು ಹೆಜ್ಜೆ ಹಿಂದಿದೆ. ಎರಡು ವರ್ಷಗಳ ಬಳಿಕ ಎರಡನೇ ಬಾರಿ ಚಾಂಪಿಯನ್ಸ್ ಲೀಗ್ ಫೈನಲ್ ತಲುಪುವ ಲಿವರ್‌ಪೂಲ್ ತಂಡದ ಹಾದಿ ಮತ್ತಷ್ಟು ಕಠಿಣವಾಗಿದೆ.
ಲೂಯಿಸ್ ಸುಯರೆಝ್ 26ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಬಾರ್ಸಿಲೋನಕ್ಕೆ ಬೇಗನೇ ಮುನ್ನಡೆ ಒದಗಿಸಿಕೊಟ್ಟರು. 75ನೇ ನಿಮಿಷದಲ್ಲಿ ಫ್ರೀ-ಕಿಕ್‌ನಲ್ಲಿ ಗೋಲು ಗಳಿಸಿದ ನಾಯಕ ಲಿಯೊನೆಲ್ ಮೆಸ್ಸಿ 85ನೇ ನಿಮಿಷದಲ್ಲಿ ಮತ್ತೊಂದು ಆಕರ್ಷಕ ಗೋಲು ಗಳಿಸಿ ಬಾರ್ಸಿಲೋನಕ್ಕೆ 3-0 ಅಂತರದ ಗೆಲುವು ತಂದುಕೊಟ್ಟರು. ಬಾರ್ಸಿಲೋನ ಪರ 600ನೇ ಗೋಲು ಗಳಿಸಿದ ಸಾಧನೆ ಯನ್ನೂ ಮಾಡಿದರು.
ಲಿವರ್‌ಪೂಲ್ ತಂಡ ಮೊದಲಾರ್ಧದಲ್ಲಿ ಸಮಬಲದ ಹೋರಾಟ ನೀಡಿತು. ದ್ವಿತೀಯಾರ್ಧದ ಆರಂಭದಲ್ಲಿ ಹೋರಾಟ ನೀಡಿದ ಲಿವರ್‌ಪೂಲ್ ಪಂದ್ಯದ ಕೊನೆಯಲ್ಲಿ ಎಡವಿತು. ಮೆಸ್ಸಿ ಅವಳಿ ಗೋಲು ಗಳಿಸಿ ಬಾರ್ಸಿಲೋನಕ್ಕೆ ಮೇಲುಗೈ ಒದಗಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಪ್ರದರ್ಶನ ನೀಡಿರುವ ಮೆಸ್ಸಿ ಹಾಗೂ ಸುಯರೆಝ್ ಎಲ್ಲ ಸ್ಪರ್ಧೆಗಳಲ್ಲಿ ಕ್ರಮವಾಗಿ 47 ಹಾಗೂ 27 ಗೋಲುಗಳನ್ನು ಬಾರಿಸಿದ್ದಾರೆ.







